ಭಯೋತ್ಪಾದನೆ ವಿರುದ್ಧ ಭಾರತದ ಸಮರಕ್ಕೆ ಸೌದಿ ಸಾಥ್! ಪಾಕ್ ಪಾಲಿಗೆ ಚೀನಾ ಒಂದೇ ಗತಿ!

ಡಿಜಿಟಲ್ ಕನ್ನಡ ಟೀಮ್:

‘ಭಾರತ ಹಾಗೂ ಸೌದಿ ಅರೇಬಿಯಾ ಪಾಲಿಗೆ ಭಯೋತ್ಪಾದನೆ ಮತ್ತು ತೀವ್ರವಾದ ಎರಡೂ ಸಮಾನ ಪಿಡುಗು. ಹೀಗಾಗಿ ಇವೆರಡರ ವಿರುದ್ಧ ಸಮರ ಸಾರುತ್ತಿರುವ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ…’ ಇದು ಸೌದಿ ಅರೇಬಿಯಾ ದೊರೆ ಮೊಹಮದ್ ಬಿನ್ ಸಲ್ಮಾನ್ ಅವರು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬುಧವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಪ್ರಮುಖ ಸಾರ.

ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಪ್ರವಾಸ ಮಾಡಿರುವ ಸೌದಿ ದೊರೆ, ‘ಭಾರತದ ಈ ಹೋರಾಟಕ್ಕೆ ಸೌದಿ ಬೆಂಬಲವಾಗಿ ನಿಲ್ಲುತ್ತದೆ. ಇದಕ್ಕಾಗಿ ಸೌದಿ ತನ್ನ ಗುಪ್ತಚರ ಮಾಹಿತಿಯನ್ನು ಭಾರತದ ಜತೆಗೆ ಹಂಚಿಕೊಳ್ಳಲು ಸಿದ್ಧ’ ಎಂದು ಘೋಷಿಸಿದೆ. ಭಾರತಕ್ಕೆ ಸೌದಿ ಈ ಮಟ್ಟಿಗೆ ತನ್ನ ಬೆಂಬಲ ವ್ಯಕ್ತ ಪಡಿಸಿರೋದು ಗಮನಾರ್ಹ. ಇಲ್ಲಿ ಒಂದು ವಿಚಾರವನ್ನು ಗಮನಿಸ ಬೇಕು. ಭಾರತ ಪ್ರವಾಸ ಮುಗಿಸಿ ಸಲ್ಮಾನ್ ಅವರು ನೇರವಾಗಿ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವ ಮೊದಲೇ ಸಲ್ಮಾನ್ ಅವರು ತನ್ನ ಬೆಂಬಲ ಭಾರತಕ್ಕೆ ಎಂದು ಘೋಷಣೆ ಮಾಡಿರೋದು, ಭಾರತದ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಮುನ್ನಡೆ ಎಂದೇ ಬಣ್ಣಿಸಬಹುದು.

‘ಭಾರತದ ಜತೆ ಎಲ್ಲ ರೀತಿಯ ರಾಜಕೀಯ ಸಹಕಾರಕ್ಕೆ ಸೌದಿ ಸಿದ್ಧವಿದೆ. ತೀವ್ರವಾದ ಹಾಗೂ ಉಗ್ರವಾದ ನಮ್ಮೆರಡೂ ದೇಶಗಳಿಗೆ ಸಮಾನ ಶತ್ರುಗಳಾಗಿದ್ದು, ಭಾರತದ ಜತೆ ಗುಪ್ತಚರ ಮಾಹಿತಿಗಳ ಹಂಚಿಕೆ ಸಹಿತ ಎಲ್ಲ ರೀತಿಯ ಸಹಕಾರಕ್ಕೆ ನಾವು ಸಿದ್ಧ’ ಎಂದು ದೊರೆ ಸಲ್ಮಾನ್ ನುಡಿದರು.

ಇನ್ನು ಇದೇವೇಳೆ ಭಯೋತ್ಪಾದನೆ ವಿರುದ್ಧದ ಸಮರ, ನೌಕಾ ಮತ್ತು ಸೈಬರ್ ಭದ್ರತೆ ವಲಯಗಳಲ್ಲಿ ಸಹಕಾರದ ಬಲವರ್ಧನೆಗೆ ಭಾರತ ಮತ್ತು ಸೌದಿ ಅರೇಬಿಯಾ ಒಪ್ಪಿಕೊಂಡಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಉಗ್ರರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ಪಾಕಿಸ್ತಾನ ಗಲ್ಫ್ ಹಾಗೂ ನೆರೆಯ ಚೀನಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಈಗ ಸೌದಿ ಅರೇಬಿಯಾ ಭಾರತದ ಬೆನ್ನಿಗೆ ನಿಂತಿರುವ ಪರಿಣಾಮ ಈಗ ಪಾಪಿ ಪಾಕಿಸ್ತಾನದ ಪಾಲಿಗೆ ಉಳಿದಿರುವ ಏಕೈಕ ಆಧಾರ ಎಂದರೆ ಅದು ಚೀನಾ ಮಾತ್ರ.

Leave a Reply