ಪಾಕಿಸ್ತಾನದಿಂದ ಬಲವಂತದ ತಪ್ಪೊಪ್ಪಿಗೆ: ಕುಲಭೂಷಣ್ ಜಾಧವ್ ಬಿಡುಗಡೆಗೆ ಭಾರತ ಒತ್ತಾಯ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಮಿಲಿಟರಿ ಹಾಗೂ ಸರ್ಕಾರ ಕುಲಭೂಷಣ್ ಜಾಧವ್ ಅವರಿಂದ ‘ಬಲವಂತದ ತಪ್ಪೊಪ್ಪಿಗೆ’ ಹೇಳಿಸಿ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಹೀಗಾಗಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು…’ ಇದು ಬುಧವಾರ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿ ಭಾರತ ಮಂಡಿಸಿದ ವಾದ.

ಸೋಮವಾರದಿಂದ ಐಸಿಜೆಯಲ್ಲಿ ಜಾಧವ್ ಪ್ರಕರಣದ ನಿರಂತರ ವಿಚಾರಣೆ ನಡೆಯುತ್ತಿದ್ದು, ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ನಿರ್ದೇಸನ ನೀಡಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ಅವರು ಅಂತಾರಾಷ್ರೀಯ ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಿದರು.

ಬುಧವಾರದ ವಿಚಾರಣೆ ವೇಳೆ ದೀಪಕ್ ಮಿತ್ತಲ್ ಅವರ ವಾದ ಹೀಗಿತ್ತು…

‘ಜಾಧವ್ ಪ್ರಕರಣದ ವಿಚಾರಣೆ ನಡೆಸಿದ ಪಾಕ್ ಸೇನಾ ಕೋರ್ಟ್ ವಿಚಾರಣೆ ಪ್ರಕ್ರಿಯೆಯಲ್ಲಿ ಕನಿಷ್ಠ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ. ಹೀಗಾಗಿ ಸೇನಾ ಕೋರ್ಟ್ ನಡೆಸಿರುವ ವಿಚಾರಣೆ ಹಾಗೂ ಗಲ್ಲು ಶಿಕ್ಷೆ ನೀಡಿರುವುದು ಕಾನೂನು ಬಾಹಿರ ಎಂದು ಘೋಷಿಸಿಬೇಕು ಮತ್ತು ಜಾಧವ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಆದೇಶಿಸಬೇಕು.’

ಇನ್ನು ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪರ ವಾದ ಮಂಡಿಸಿದ ವಕೀಲರಾದ ಹರೀಶ್ ಸಾಳ್ವೆ ಹೇಳಿದಿಷ್ಟು…

‘ಜಾಧವ್ ಅವರು ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸಮರ್ಥ ಸಾಕ್ಷ್ಯ ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಅಲ್ಲದೆ ಜಾಧವ್ ಅವರನ್ನು ಬಲವಂತದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಗಿದೆ. ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರ ತಪ್ಪೊಪ್ಪಿಗೆ ದಾಖಲೆಗಳನ್ನು ಪ್ರಚಾರದ ಸಾಧನವಾಗಿ ಬಳಸಿಕೊಳ್ಳುತ್ತಿದೆ. ಜಾಧವ್ ವಿರುದ್ಧ 2016ರ ಏಪ್ರಿಲ್ ನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 2016ರ ಮೇ ತಿಂಗಳಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಈ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ.’

Leave a Reply