ಶಾಸಕ ಗಣೇಶ್‌ಗೆ ಬಹುತೇಕ ಜೈಲೇ ಗತಿ..!

ಡಿಜಿಟಲ್ ಕನ್ನಡ ಟೀಮ್:

ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದ ಕಂಪ್ಲಿ ಶಾಸಕ ಗಣೇಶ್, ನಿನ್ನೆ ಗುಜರಾತ್‌ನ ಸೋಮನಾಥದಲ್ಲಿ ಸಿಕ್ಕಿಬಿದ್ದಿದ್ರು. ಇಂದು ಬೆಳಗ್ಗೆ ವಿಮಾನ ಮೂಲಕ ಬೆಂಗಳೂರಿಗೆ ಶಾಸಕ ಗಣೇಶ್‌ರನ್ನು ಕರೆತರಲಾಗಿದ್ದು, ನೇರವಾಗಿ ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಜನವರಿ 19ರ ರಾತ್ರಿ ಈಗಲ್ಟನ್ ರೆಸಾರ್ಟ್ ಘಟನೆ ಬಗ್ಗೆ ಈಗಾಗಲೇ ಪೂರ್ಣ ತನಿಖೆ ಮುಗಿಸಿರುವ ಪೊಲೀಸರು, ಶಾಸಕ ಗಣೇಶ್ ಅವರ ಹೇಳಿಕೆ ಪಡೆಯೋದಷ್ಟೆ ಬಾಕಿ ಉಳಿಸಿಕೊಂಡಿದ್ದಾರೆ. ಬಿಡದಿ ಠಾಣೆಯಲ್ಲಿ ಶಾಸಕ ಗಣೇಶ್ ಹೇಳಿಕೆ ದಾಖಲಿಸಿಕೊಂಡ ಬಳಿಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಅಲ್ಲಿಂದ ನೆರವಾಗಿ ರಾಮನಗರ ಕೊರ್ಟ್‌ಗೆ ಕಂಪ್ಲಿ ಶಾಸಕನನ್ನು ಹಾಜರುಪಡಿಸಲಿದ್ದಾರೆ.

ಪೊಲೀಸರು ಈಗಾಗಲೇ ವಿಚಾರಣೆ ಮುಕ್ತಾಯ ಮಾಡಿರೋ ಕಾರಣಕ್ಕೆ ಮತ್ತೆ ವಶಕ್ಕೆ ಕೇಳುವ ಸಾಧ್ಯತೆ ತೀರ ಕಡಿಮೆ. ಈಗಾಗಲೇ ಘಟನೆ ನಡೆದ ಸ್ಥಳದ ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಸಂಬಂಧಪಟ್ಟ ಸಾಕ್ಷಿಗಳನ್ನೂ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನು ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಅವರ ವಿಚಾರಣೆಯೂ ಪೂರ್ಣಗೊಂಡಿದ್ದು, ಇನ್ನೇನಿದ್ದರು ದೋಷಾರೋಪಣ ಪಟ್ಟಿ (FIR) ಸಲ್ಲಿಸುವುದು ಮಾತ್ರ ಬಾಕಿ ಇದೆ ಹೀಗಾಗಿ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಮತ್ತೆ ಕಸ್ಟಡಿಗೆ ಕೊಡುವಂತೆ ಕೇಳಿಕೊಳ್ಳದಿರಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಇನ್ನು ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಧನಕ್ಕೂ ಮುನ್ನವೇ ಹಿಂಪಡೆಡಿರುವ ಹಿನ್ನೆಲೆಯಲ್ಲಿ ಗಣೇಶ್ ಈಗ ಮತ್ತೇ ಜಾಮೀನು ಅರ್ಜಿ ಸಲ್ಲಿಸುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ.

ತಲೆ ಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಜಾಮೀನು ಸಿಗುವುದು ಕಷ್ಟ ಎಂದು ಹಿಂಪಡೆದು, ಈಗ ತಾವು ತನಿಖೆಗೆ ಸಹಕಾರ ನೀಡುತ್ತೇವೆ ಎಂದು ಹೇಳಿ ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ ಸಧ್ಯದ ಮಟ್ಟಿಗೆ ಗಣೇಶ್ ಬಹುತೇಕ ಜೈಲು ಪಾಲಾಗುವ ಸಾಧ್ಯತೆಯೇ ಹೆಚ್ಚಾಗಿದೆ.

Leave a Reply