ಕಾಶ್ಮೀರದಲ್ಲಿ ಸರ್ಕಾರದ ಕಠಿಣ ನಿರ್ಧಾರ! 18 ಪ್ರತ್ಯೇಕವಾದಿ, 155 ರಾಜಕಾರಣಿಗಳ ಭದ್ರತೆ ವಾಪಸ್!

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮ ದಾಳಿಯ ನಂತರ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಹಾಗೂ ಭಯೋತ್ಪಾದಕರ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿದ್ದವರ ವಿರುದ್ಧ ಸರ್ಕಾರ ಬಿಗಿ ನಿರ್ಧಾರ ಕೈಗೊಂಡಿದೆ. ಪರಿಣಾಮ ಕಾಶ್ಮೀರ ಪ್ರತ್ಯೇಕತೆಯ ಕೂಗು ಹಾಕುತ್ತಿದ್ದ 18 ಪ್ರತ್ಯೇಕತಾವಾದಿಗಳು ಹಾಗೂ ಪಿಡಿಪಿ ನಾಯಕ ವಹಿದ್ ಪರ್ರಾ ಹಾಗೂ ಐಎಎಸ್ ಅಧಿಕಾರಿ ಶಾಹ್ ಫೈಸಲ್ ಸೇರಿದಂತೆ 155 ರಾಜಕಾರಣಿಗಳ ಭದ್ರತೆಯನ್ನು ಹಿಂಪಡೆದಿದೆ.

ಕಣಿವೆ ರಾಜ್ಯದಲ್ಲಿರುವ ರಾಜ್ಯಪಾಲರ ಆಡಳಿತದಲ್ಲಿ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಸಿ, ‘ಪ್ರತ್ಯೇಕವಾದಿಗಳಿಗೆ ನೀಡುತ್ತಿದ್ದ ಭದ್ರತೆ ವ್ಯರ್ಥ. ಹೀಗಾಗಿ ಅವರಿಗೆ ನೀಡಲಾಗಿರುವ ಭದ್ರತೆ ಹಿಂಪಡೆಯಬೇಕು’ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಎಸ್ಎಎಸ್  ಗೀಲಾನಿ, ಆಗ ಸಯೀದ್ ಮೋಸ್ವಿ, ಮೌಲ್ವಿ ಅಬ್ಬಾಸ್ ಅನ್ಸಾರಿ, ಯಾಸೀನ್ ಮಲಿಕ್, ಸಲೀಮ್ ಗೀಲಾನಿ, ಶಾಹಿದ್ ಉಲ್ ಇಸ್ಲಾಮ್, ಜಾಫರ್ ಅಕ್ಬರ್ ಭಟ್, ನಯೀಮ್ ಅಹ್ಮದ್ ಖಾನ್, ಮುಖ್ತಾರ್ ಅಹ್ಮದ್ ವಾಜಾ, ಫಾರೂಖ್ ಅಹ್ಮದ್ ಕಿಚ್ಲೋ, ಮಸ್ರೂರ್ ಅಬ್ಬಾಸ್ ಅನ್ಸಾರಿ, ಆಗಾ ಸಯೀದ್ ಅಬ್ದುಲ್ ಹುಸ್ಸೇನ್, ಅಬ್ದುಲ್ ಗನಿ ಶಾಹ್ ಮತ್ತು ಮೊಹ್ದ್ ಮುಸದಿಕ್ ಭಟ್ ರಂತಹ ಪ್ರಮುಖ ಪ್ರತ್ಯೇಕವಾದಿ ನಾಯಕರ ಭದ್ರತೆ ಹಿಂಪಡೆಯಲಾಗಿದೆ.

ಇನ್ನು ಇತ್ತೀಚೆಗಷ್ಟೇ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ 2010ನೇ ಬ್ಯಾಚ್ ನ ಐಎಎಸ್ ಟಾಪರ್ ಶಾಹ್ ಫೈಸಲ್ ಹಾಗೂ ಪಿಡಿಪಿ ನಾಯಕ ವಹಿದ್ ಪರ್ರಾ ಸೇರಿದಂತೆ 155 ರಾಜಕಾರಣಿಗಳ ಭದ್ರತೆ ಹಿಂಪಡೆದಿರುವುದು ಭಾರತ ಕಣಿವೆ ರಾಜ್ಯದಲ್ಲಿ ಕೇವಲ ಭಯೋತ್ಪಾದನೆ ಮಾತ್ರವಲ್ಲ. ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡುವವರನ್ನು ಕೂಡ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ.

ಪುಲ್ವಾಮಾ ಉಗ್ರ ದಾಳಿ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ‘ಕಾಶ್ಮೀರ ಪ್ರತ್ಯೇಕವಾದಿಗಳು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಜತೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಅವರಿಗೆ ನೀಡಿದ ಭದ್ರತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಪಾಕ್ ನಿಂದ ಹಣಪಡೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು, ಇಂತಹವರಿಗೆ ಕಲ್ಪಿಸಲಾಗುತ್ತಿರುವ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗುವುದು’ ಎಂದು ತಿಳಿಸಿದ್ದರು. ಈಗ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

Leave a Reply