ಸುಮಲತಾ ಅಂಬರೀಶ್​ ಪಕ್ಷೇತರರಾಗಿ ಸ್ಪರ್ಧೆ..?

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಘೋಷಣೆಗೂ ಮುನ್ನವೇ ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರ ಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಗೌಡರ ಕುಟುಂಬ ಸರ್ವಪ್ರಯತ್ನ ನಡೆಸಿದೆ.. ಈ ನಡುವೆ ದಿವಂಗತ ನಾಯಕ ಮಾಜಿ ಸಚಿವ ಅಂಬರೀಶ್​ ಅವರ ಪತ್ನಿ ನಟಿ ಸುಮಲತಾ ಅಂಬರೀಶ್​ ಸ್ಫರ್ಧೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮೊನ್ನೆ ಮಂಡ್ಯದಲ್ಲಿ ಘೋಷಣೆ ಮಾಡಿದ್ದ ನಟಿ ಸುಮಲತಾ ಅಂಬರೀಶ್​, ನಾನು ಜನರ ನಿರ್ಧಾರಕ್ಕೆ ಮನ್ನಣೆ ಕೊಡ್ತೇನೆ ಎಂದಿದ್ರು. ಆ ಬಳಿಕ ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್​, ಮಂಡ್ಯದಿಂದ ಸ್ಫರ್ಧೆ ಬಗ್ಗೆ ಚರ್ಚೆ ನಡೆಸಿದ್ರು. ಆ ಬಳಿಕ ಮಾತನಾಡಿದ ಸುಮಲತಾ, ಪಕ್ಷೇತರರಾಗಿ ಆದರೂ ಸ್ಪರ್ಧೆ ಮಾಡಿಯೇ ಮಾಡ್ತೇನೆ ಅನ್ನೋ ಬಗ್ಗೆ ಸುಳಿವು ಕೊಟ್ರು.

ಲೋಕಸಭೆಗೆ ಸ್ಪರ್ಧೆ ಮಾಡುವ ಬಗ್ಗೆ ನಮ್ಮ ಪಕ್ಷದವರ ಬಳಿ ಮಾತನಾಡಲು ಭೇಟಿ ನೀಡುತ್ತಿದ್ದು, ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡುತ್ತಿದ್ದೇನೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಹಿರಿಯ ಮುಖಂಡರು, ಹಾಗಾಗಿ ಅವರ ಜೊತೆಯೂ ಮಾತನಾಡಲು ಬಂದಿದ್ದೆ. ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಮಂಡ್ಯ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಅವರ ಅನಿಸಿಕೆಯನ್ನು ಚರ್ಚಿಸಲು ತೀರ್ಮಾನಿಸಿದ್ದು, ಈ ಕಾರಣಕ್ಕೆ ಸಿದ್ದರಾಮಯ್ಯ ಭೇಟಿ ಮಾಡಿದ್ದೇನೆ. ಅಭಿಮಾನಿಗಳ ಅಪೇಕ್ಷೆಯನ್ನು ಅವರಲ್ಲಿ ಹೇಳಿದ್ದೇನೆ. ಸಿದ್ದರಾಮಯ್ಯ ಯೋಚನೆ ಮಾಡೋದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿಪ್ರಾಯ ತಿಳಿದುಕೊಳ್ಳಬೇಕಿದ್ದು, ನಾನು ಯಾವುದೇ ಕಾರಣಕ್ಕೂ ಅವಸರ ಮಾಡೋದಿಲ್ಲ ಎಂದಿದ್ದಾರೆ.

ಮೈತ್ರಿ ವಿಚಾರಕ್ಕೆ JDSಗೆ ಕ್ಷೇತ್ರ ಬಿಟ್ಟುಕೊಡುವ ವಿಚಾರ ಕಾಂಗ್ರೆಸ್​ನಲ್ಲಿದೆ. ಆ ರೀತಿ ಆದರೆ ನಾನು ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತೀನಿ. ಮಂಡ್ಯ ಜನರ ಅಭಿಪ್ರಾಯವೇ ನೂರಕ್ಕೆ ನೂರು ಅಂತಿಮ. ಏನೇ ಪರಿಸ್ಥಿತಿ ಬಂದರೂ ಜನರ ಅಭಿಪ್ರಾಯದ ಪರವಾಗಿ ನಾನು ನಿಲ್ಲುತ್ತೇನೆ ಎಂದಿರುವ ಸುಮಲತಾ ಅಂಬರೀಶ್​, ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಬಗ್ಗೆ ಜನರ ತೀರ್ಮಾನಕ್ಕೆ ಬಿಡ್ತೀನಿ ಎಂದಿದ್ದಾರೆ. ಇನ್ನೂ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡ್ತೀರಾ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ನಾನು ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆಯುತ್ತಿದ್ದೇನಷ್ಟೇ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ವರಿಷ್ಠರ ಭೇಟಿ ಮಾಡಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ನೇರವಾಗಿ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್​ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬೇಕಾಗಿ ಬರಬಹುದು, ನಾನು ನಿಮಗೆ ಟಿಕೆಟ್​ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದ್ದು, ಪಕ್ಷೇತರರಾಗಿ ನಿಲ್ಲಲು ನಮ್ಮದೇನು ಅಭ್ಯಂತರವಿಲ್ಲ. ಜೆಡಿಎಸ್​ ವಿರೋಧಿಸುವ ಕಾಂಗ್ರೆಸ್​ ಮತಗಳು ನಿಮ್ಮ ಪಾಲಾಗಬಹುದು, ಜೊತೆಗೆ ಬಿಜೆಪಿಯೂ ಪರೋಕ್ಷವಾಗಿ ನಿಮ್ಮನ್ನು ಬೆಂಬಲಿಸಿದರೆ, ನಿಮ್ಮ ಗೆಲುವು ಸರಳ ಆಗಬಹುದು ಎನ್ನುವ ಸೂತ್ರವನ್ನು ಸಿದ್ದರಾಮಯ್ಯ ಅವರೇ ನೀಡಿದ್ದಾರೆ ಎನ್ನಲಾಗಿದ್ದು, ಮಂಡ್ಯ ಕ್ಷೇತ್ರದಿಂದ ನಟಿ ಸುಮಲತಾ ಅಂಬರೀಶ್​ ಸ್ಪರ್ಧೆ ಮಾಡೋದು ಖಚಿತವಾಗಿದೆ.

Leave a Reply