ಮಂಡ್ಯದಲ್ಲಿ ಜೆಡಿಎಸ್ ಗೆ ತಲೆನೋವು ತಂದಿರುವ ಸುಮಲತಾ!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಜೆಡಿಎಸ್ ಪಾಲಿನ ಅಭೇದ್ಯ ಕೋಟೆ ಅನ್ನೋದು ಕಳೆದ ಬಾರಿಯ ಚುನಾವಣೆಯಲ್ಲಿ ಸಾಬೀತಾಗಿದೆ. ಐದು ತಿಂಗಳ ಹಿಂದೆ ನಡೆದ ಲೊಕಸಭಾ ಉಪ ಚುನಾವಣೆಯಲ್ಲೂ ಎಲ್. ಆರ್ ಶಿವರಾಮೇಗೌಡರನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ದೇವೇಗೌಡರ ಪಕ್ಷಕ್ಕೆ ನಮ್ಮ ಬೆಂಬಲ ಅನ್ನೋದನ್ನು ಜನ ಸಾರಿ ಹೇಳಿದ್ದಾರೆ. ಆದ್ರೀಗ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳಕ್ಕೆ ಹಿರಿಯ ನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಶಾನೆ ತಲೆಬೇನೆ ಆಗಿ ಪರಿಣಮಿಸಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆ ಆಗುವ ಮುಂಚೆಯೇ ದೇವೇಗೌಡರ ಮನೆಯ ಮೂರನೇ ತಲೆಮಾರಿನ ನಿಖಿಲ್ ಗೌಡರ ಹೆಸರನ್ನು ಅಭ್ಯರ್ಥಿಯಾಗಿ ತೇಲಿ ಬಿಡಲಾಗಿದ್ದು, ನಿಖಿಲ್ ಸ್ಪರ್ಧೆಗೆ ತೆರೆಮರೆಯ ಕಸರತ್ತು ಆರಂಭವಾಗಿದೆ. ಆದ್ರೆ ಇದೀಗ ಕಣಕ್ಕಿಳಿಯಲು ಸುಮಲತಾ ಮಾಡಿರುವ ನಿರ್ಧಾರ ಜೆಡಿಎಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ನಟಿ ಸುಮಲತಾ, ಈಗಲಾಲೇ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದ್ರಿಂದ ಜೆಡಿಎಸ್‌ ಅಡಕತ್ತರಿಯಲ್ಲಿ ಸಿಕ್ಕಂತಾಗಿದ್ದು, ಯಾವ ರೀತಿ ಸಮಸ್ಯೆಯಿಂದ ಹೊರಬರಬೇಕು ಅನ್ನೋ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಕಳೆದ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡ್ತೇವೆ ಅನ್ನೋ ಭರವಸೆ ನೀಡಿ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ಪಕ್ಷಕ್ಕೆ ಕರೆತರಲಾಗಿತ್ತು. ಆ ಬಳಿಕ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಸುರೇಶ್ ಗೌಡ ಅವರಿಗೆ ಟಿಕೆಟ್ ನೀಡಿದ್ದು, ಲೋಕಸಭೆ ಟಿಕೆಟ್ ನಿಮಗೆ ಅನ್ನೋ ಮಾತನ್ನೇಳಿ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ಸಮಾಧಾನ ಮಾಡಲಾಗಿತ್ತು. ಆದ್ರೆ ಕಳೆದ ಲೋಕಸಭೆ ಉಪಚುನಾವಣೆ ವೇಳೆ ಎಲ್.ಆರ್ ಶಿವರಾಮೇಗೌಡರಿಗೆ ಟಿಕೆಟ್ ಕೊಡಲಾಯ್ತು. ಆಗ ಇದು ಉಪಚುನಾವಣೆ, ಸಾರ್ವತ್ರಿಕ ಚುನಾವಣೆಗೆ ನಿಮ್ಮನ್ನು ಪರಿಗಣಿಸ್ತೇವೆ ಅನ್ನೋ ಭರವಸೆ ಜೆಡಿಎಸ್ ನಾಯಕರಿಂದ ಸಿಕ್ಕಿತ್ತು.‌ ಇದೀಗ ನಿಖಿಲ್ ಗೌಡ ಸ್ಪರ್ಧೆಗೆ ತಯಾರಿ ನಡೆದಿದ್ದು, ಅಶ್ವಿನಿ ಗೌಡ ಅವರಿಗೆ ಈ ಬಾರಿಯೂ ಟಿಕೆಟ್ ಡೌಟು ಅನ್ನೋ ಮಾತುಗಳು ಕೇಳಿ ಬಂದಿವೆ.

ಒಂದು ವೇಳೆ ಸುಮಲತಾ ಅಂಬರೀಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿದ್ರೆ ಜೆಡಿಎಸ್ ಕೋಟೆ ಹಿಂದಿನಷ್ಟೇ ಸುಭದ್ರವಾಗಿ ಉಳಿಯುತ್ತದೆಯೇ ಎನ್ನೋ ಪ್ರಶ್ನೆ ಉದ್ಭವವಾಗಿದೆ.

ಸ್ವತಃ ಜೆಡಿಎಸ್ ನಾಯಕರು, ಕಾರ್ಯಕರ್ತರೇ ಈ ಬಗ್ಗೆ ತಮಗೆ ತಾವೇ ಪ್ರಶ್ನೆ ಕೇಳಿಕೊಂಡಿದ್ದು, ಉತ್ತರಕ್ಕಾಗಿ ತಡಕಾಡುತ್ತಿದ್ದಾರೆ. ದೇವೇಗೌಡರ ಮೊಮ್ಮಗನನ್ನು ನಿಲ್ಲಿಸಿದ್ರೆ ಯಾವ ರೀತಿ ಮತ ಕೇಳೋದು ಅನ್ನೋ ತಂತ್ರಗಳನ್ನು ಹುಡುಕುತ್ತಿದ್ದಾರೆ. ಬೇರೆ ನಾಯಕರಾದರೆ ಸುಮಲತಾ ಅವರಷ್ಟೇ ಅಲ್ಲದೆ ಬೇರೆ ಯಾರೇ ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿದರೂ ಜೆಡಿಎಸ್ ಅಭ್ಯರ್ಥಿ ಗೆಲುವು ಸುಲಭ ಎಂಬ ನಂಬಿಕೆ ಅವರಿಗಿದೆ. ಒಂದು ವೇಳೆ ನಿಖಿಲ್ ಗೌಡ ಸ್ಪರ್ಧಿಸಿದ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತಗಳು ಹಿಂದಿನಂತೆಯೇ ಭದ್ರವಾಗಿ ಉಳಿಯಲಿವೆಯೇ ಎಂಬ ಪ್ರಶ್ನೆ ಮೂಡಿದೆ. ನಿಖಿಲ್ ಸ್ಪರ್ಧೆಗೆ ಜೆಡಿಎಸ್ ಶಾಸಕರು ಕರ್ತವ್ಯಪ್ರಜ್ಞೆಯಿಂದ ಉಘೇ ಉಘೇ ಎನ್ನುತ್ತಿದ್ದಾರೆ.

ಆದರೆ ಕಳೆದ ಬಾರಿ ಮಂಡ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲೂ ದಿಗ್ವಿಜಯ ಸಾಧಿಸಿದ್ದ ಜೆಡಿಎಸ್ ತನ್ನ ಹಿಂದಿನ ಶಕ್ತಿಯನ್ನೇ ನಂಬಿಕೊಂಡಿದೆ. ಜೆಡಿಎಸ್ ಮತಗಳು ಯಾವುದೇ ಕಾರಣಕ್ಕೂ ಅಲುಗಾಡುವುದಿಲ್ಲ ಎಂಬ ನಂಬಿಕೆಯೇ ನಿಖಿಲ್ ಗೌಡ ಅವರನ್ನು ಹುರಿಯಾಳನ್ನಾಗಿ ಮಾಡಲು ಪ್ರೇರಣೆ ಆಗಿದೆ.

Leave a Reply