ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ನೌಟಂಕಿ ಆಟ!

ಡಿಜಿಟಲ್ ಕನ್ನಡ ಟೀಮ್:

ತನ್ನ ನೆಲದಲ್ಲಿರುವ ಉಗ್ರರನ್ನು ಸದೆಬಡಿಯುವ ಬದಲು ಅವರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಈ ವಿಚಾರದಲ್ಲಿ ತನ್ನ ನೌಟಂಕಿ ಆಟ ಮುಂದುವರಿಸಿದೆ. ಅದಕ್ಕೆ ಈಗ ಮತ್ತೊಂದು ಸಾಕ್ಷಿ, ಪಾಕಿಸ್ತಾನ ತನ್ನ ನೆಲದಲ್ಲಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆಯನ್ನು ನಿಷೇಧಿಸಿದೆ.

ಪಾಕಿಸ್ತಾನದ ಭಯೋತ್ಪಾದನಾ ಪರ ಧೋರಣೆ ವಿರುದ್ಧ ಜಾಗತಿಕ ಮಟ್ಟದಲ್ಲಿ ತೀವ್ರ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಈ ಕ್ರಮದ ಮೂಲಕ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡಿದೆ.

ಕಾರಣ, ಜಮಾತ್ ಉದ್ ದವಾ ಒಂದು ಉಗ್ರ ಸಂಘಟನೆ. ಇದು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಒಂದು ಅಂಗ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕ 2008ರ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್.

ಭಾರತದ ವಿರುದ್ಧ ಪ್ರತಿ ಕ್ಷಣ ವಿಷಕಾರುವ ಈ ವಿಷ ಜಂತು ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾನೆ. ಭಯೋತ್ಪಾದನೆಯ ಹೆಮ್ಮರದಂತೆ ಹಫೀಜ್ ಸಯೀದ್ ನನ್ನು ಬೆಳೆಸಿರುವ ಪಾಕಿಸ್ತಾನ, ಜೆಯುಡಿ ಸಂಘಟನೆ ನಿಷೇಧ ಹೇರುವ ಮೂಲಕ ಈ ಹೆಮ್ಮರದ ಒಂದು ಪುಟ್ಟ ರೆಂಬೆಯನ್ನು ಕತ್ತರಿಸುವ ಪ್ರಹಸನಕ್ಕೆ ಮುಂದಾಗಿದೆ.

ಪಾಕಿಸ್ತಾನಕ್ಕೆ ನಿಜವಾಗಿಯೂ ಪ್ರಾಮಾಣಿಕವಾಗಿ ಭಯೋತ್ಪಾದನೆ ಹತ್ತಿಕ್ಕುವ ಪ್ರಯತ್ನ ಮಾಡುವುದೇ ಆದರೆ ಮೊದಲು, ಉಗ್ರ ಹಫೀಜ್ ಸಯೀದ್ ನನ್ನು ಮಟ್ಟ ಹಾಕಬೇಕು. ಕೇವಲ ಹಫೀಜ್ ಸಯೀದ್ ಮಾತ್ರವಲ್ಲ ಮಸೂದ್ ಅಜರ್ ನಂತಹ ರಕ್ತಬೀಜಾಸುರರನ್ನು ಬಲಿ ಹಾಕಬೇಕು. ಇಲ್ಲವಾದರೆ ಜಮಾತ್ ಉದ್ ದವಾ ನಿಷೇಧವಾದರೆ ಮತ್ತೊಂದು ಹೆಸರಲ್ಲಿ ಉಗ್ರ ಸಂಘಟನೆ ಆರಂಭಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದ ವಿರುದ್ಧ ಪ್ರತಿ ಬಾರಿ ಭಯೋತ್ಪಾದಕ ದಾಳಿ ನಡೆದಾಗ ಅದಕ್ಕೂ ನನಗೂ ಸಂಬಂಧವಿಲ್ಲ ಎನ್ನುವ ಪಾಕಿಸ್ತಾನ, ಉಗ್ರ ದಾಳಿ ನಡೆಸಿದ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಲೇ ಭಾರತಕ್ಕೆ ಸಾಕ್ಷಿ ಕೇಳುತ್ತದೆ. ಭಾರತ ಅನೇಕ ಸಾಕ್ಷಿಗಳನ್ನು ಪಾಕಿಸ್ತಾನಕ್ಕೆ ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಸದ್ಯ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಜಮಾತ್ ಉದ್ ದವಾ ನಿಷೇಧದ ಕ್ರಮ ತನ್ನ ನೌಟಂಕಿ ಆಟದ ಮುಂದುವರಿದ ಭಾಗ ಅಷ್ಟೆ.

Leave a Reply