ಏರೋ ಇಂಡಿಯಾದಲ್ಲಿ 340 ಕಾರು ಭಸ್ಮ ಆಗಿದ್ಯಾಕೆ..? ಮುಂದೇನು‌..?

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು ನಾಳೆ ಅಂದ್ರೆ ಭಾನುವಾರ ಏರೋ ಇಂಡಿಯಾ ಪ್ರದರ್ಶನ ಅಂತ್ಯವಾಗಲಿದೆ. ಪ್ರದರ್ಶನ ಅಂತ್ಯವಾಗಲು ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಘೋರ ದುರಂತ ನಡೆದು ಬಿಟ್ಟಿದೆ. ಏರೋ‌ ಇಂಡಿಯಾದಲ್ಲಿ ವಿಮಾನಗಳ ರೋಮಾಂಚನ ಹಾರಾಟವನ್ನು ನೋಡಲು ಕಾರಲ್ಲಿ ಹೋದವರು ಬಸ್‌ನಲ್ಲಿ ವಾಪಸ್ ಬರುವಂತಾಗಿದೆ. ಯಾಕಂದ್ರೆ ಕಾರು ಪಾರ್ಕಿಂಗ್ ಮಾಡಿ ವಿಮಾನಗಳತ್ತ ಕಣ್ಣು ಹಾಯಿಸಿದ್ದವರಿಗೆ ಹೊಗೆ ಘಾಟು ಗಮನಸೆಳೆದಿತ್ತು. ಕಾರಿನಲ್ಲಿ ಬಂದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳು ಧಗಧಗನೆ ಹೊತ್ತು ಉರಿಯುತ್ತಿದ್ವು.‌ ಇದೇ ರೀತಿ ಬರೋಬ್ಬರಿ 340 ಐಶಾರಾಮಿ ವಿವಿಧ ಕಾರುಗಳು ಬೆಂಕಿಗಾಹುತಿ ಆಗಿವೆ.

ವಾಹನ ನಿಲ್ಲಿಸಲು ರಕ್ಷಣಾ ಇಲಾಖೆಯವರು ವ್ಯವಸ್ಥೆ ಮಾಡಿದ್ದ ಪಾರ್ಕಿಂಗ್ ಜಾಗದಲ್ಲಿ ಒಣ ಹುಲ್ಲು ಹೆಚ್ಚಾಗಿತ್ತು, ಆಯೋಜಕರು ಮುಂಜಾಗ್ರತೆಯಿಂದ ಹುಲ್ಲಿನ‌ ಮೇಲೆ ನೀರು ಹಾಯಿಸಿದ್ದರೆ ಹೆಚ್ಚಿನ ಅಗ್ನಿ ಅನಾಹುತ ನಡೆಯದಂತೆ ತಪ್ಪಿಸಬಹುದಿತ್ತು. ಇಂದಿನ ಅನಾಹುತಕ್ಕೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜಕರ ‌ನಿರ್ಲಕ್ಷ್ಯವೇ ಕಾರಣ ಅನ್ನೋ ಮಾತುಗಳು ಕೇಳಿ ಬಂದಿವೆ. ಘಟನೆ ಅನಿರೀಕ್ಷಿತವಾಗಿ ನಡೆದಿರಬಹುದು. ಆಯೋಜಕರು ಮುಂಜಾಗ್ರತೆ ವಹಿಸಬೇಕಿತ್ತು ಬೇಸಿಗೆಯಾಗಿರೋದರಿಂದ ಸಣ್ಣ ಕಿಡಿ ಕಾಣಿಸಿಕೊಂಡ್ರು ಅಗ್ನಿ ಅವಘಡ ಸಂಭವಿಸೋದು ಸಹಜ. ಇದರ ಅರಿವು ಆಯೋಜಕರಿಗೆ ಇರಬೇಕಿತ್ತು ಎಂದು ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ಯಾವುದೇ ಒಂದು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡುವಾಗ ಅಗ್ನಿ ದುರಂತ ಸೇರಿದಂತೆ ಬೇರಾವುದೇ ಅನಾಹುತ ತಪ್ಪಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಆದ್ರೆ ಏರೋ ಇಂಡಿಯಾದಂತ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದವರು ಒಂದು ಅಗ್ನಿಶಾಮಕ ದಳದ ವಾಹನ ನಿಲ್ಲಿಸಿಕೊಂಡಿರಲಿಲ್ಲ. ಒಂದು ವೇಳೆ ಅಗ್ನಿಶಾಮಕ ವಾಹನ ಇದ್ದಿದ್ದರೆ ಬೆಂಕಿ ಕಾಣಿಸಿದ ಕೂಡಲೆ ನಂದಿಸಬಹುದಿತ್ತು ಅನ್ನೋ ಮಾತುಗಳು ಕೇಳಿಬಂದಿವೆ. ಜೊತೆಗೆ ಏರೋ ಇಂಡಿಯಾ ಸಂದರ್ಭದಲ್ಲಿ ಒಂದೇ ಒಂದು ಹೆಲಿಕಾಪ್ಟರ್ ಅಗ್ನಿಶಾಮಕ ವಾಹನ ಇದ್ದಿದ್ದರೆ, ಬೆಂಕಿಯನ್ನು ಸರಳವಾಗಿ ತಡೆಯಬಹುದಿತ್ತು, ಅಗ್ನಿಶಾಮಕ ವಾಹನ ಬರುವ ತನಕ ಕಾಯುತ್ತಾ ನಿಂತಿದ್ರಿಂದ ದುರಂತ ಜಾಸ್ತಿಯಾಯ್ತು ಅನ್ನೋದು ತಜ್ಞರ ಮಾತಾಗಿದೆ.

ಬೆಂಕಿ ಅನಾಹುತಕ್ಕೆ ಪೊಲೀಸರು ಕಾರಣ ಹುಡುಕುತ್ತಿದ್ದು, ಯಾರಾದರೂ ಸಿಗರೇಟ್ ಸೇದಿ ತುಂಡನ್ನು ಬಿಸಾಕಿದ್ರಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಅದರ ಜೊತೆಯಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರುವ ಬಗ್ಗೆಯು ಶಂಕೆ ವ್ಯಕ್ತವಾಗಿದ್ದು ಪೊಲೀಸರು ಈ ಬಗ್ಗೆಯೂ ತನಿಖೆ ಶುರು ಮಾಡಿದ್ದಾರೆ.

ಅಗ್ನಿ ಅವಘಡದಲ್ಲಿ ನೂರಾರು ವಾಹನಗಳು ಭಸ್ಮವಾಗಿದ್ದು, ಸಾಕಷ್ಟು ವಾಹನಗಳ ಚಾರ್ಸಿ ನಂಬರ್ ಹಾಗೂ ಗಾಡಿ ನಂಬರ್ ಕಾಣದಂತೆ ಸುಟ್ಟು ಹೋಗಿದೆ. ವಾಹನ ಮಾಲೀಕರು ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಬೇಕು. ಆ ಬಳಿಕ ವಿಮಾ ಕಂಪನಿಗೆ ಹಾಗೂ ಸಾರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಆ ಬಳಿಕ ಆರ್‌ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿ ವಾಹನದ ಸ್ಥಿತಿಗತಿ ಬಗ್ಗೆ ವಿಮಾ ಕಂಪನಿಗೆ ಮಾಹಿತಿ ನೀಡುತ್ತಾರೆ. ನಂತರ ವಿಮೆ ಚಾಲ್ತಿಯಲ್ಲಿದ್ದರೆ ವಾಹನ ಮಾಲೀಕರಿಗೆ ವಿಮಾ ಮೊತ್ತ ಪಾವತಿ ಮಾಡ್ತಾರೆ ಎಂದಿದ್ದಾರೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್. ನಾಳೆ ಭಾನುವಾರವಾದರೂ ಯಲಹಂಕ ಆರ್‌ಟಿಒ ಅಧಿಕಾರಿಗಳು ಸಂಪೂರ್ಣ ದಿನ ಕೆಲಸ ಮಾಡಲಿದ್ದು, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಆರ್‌ಟಿಒ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಚನೆ ರವಾನಿಸಲಾಗಿದೆ. ಸುಟ್ಟುಹೋದ ವಾಹನ ಮಾಲೀಕರು ಸಂಪರ್ಕಿಸಲು ಕೋರಲಾಗಿದೆ.

Leave a Reply