ಯಡಿಯೂರಪ್ಪಗೆ ಡೆಡ್ ಲೈನ್ ಕೊಟ್ರಾ ಅಮಿತ್ ಶಾ!!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಇವತ್ತು ಪತನ ಆಗುತ್ತೆ, ನಾಳೆ, ಮುಂದಿನ ತಿಂಗಳು ಎಂದು ಪತನ ಆಗುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದರು. ಆದರೆ ಸರ್ಕಾರ ಮಾತ್ರ ಕುಂಟುತ್ತಾ, ತೆವಳುತ್ತಾ ಸಾಗುತ್ತಲೇ ಇದೆ. ಅದೆಷ್ಟೋ ಅಡೆ-ತಡೆ, ಆಪರೇಷನ್‌ ಪ್ರಯತ್ನಗಳನ್ನು ತಡೆದುಕೊಂಡು ನಿಧಾನವಾಗಿ ಹಳ್ಳ-ಕೊಳ್ಳ ಇಳಿದು ಸಾಗುವ ಕಿರು ನದಿಯ ಹಾಗೆ ಮುನ್ನಡೆಯುತ್ತಿದೆ. ಇದೀಗ ದೊಡ್ಡ ಸಾಗರವೇ ನದಿಯನ್ನು ನುಂಗಲು ಎದುರಾದಂತೆ ಇಡೀ ರಾಜ್ಯ ಸರ್ಕಾವರನ್ನೇ ನುಂಗುವ ಭರವಸೆ ಕೊಟ್ಟಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ!

ಬೆಂಗಳೂರಿಗೆ ಗುರುವಾರ ಆಗಮಿಸಿದ್ದ ಅಮಿತ್ ಶಾ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22 ಸ್ಥಾನಗಳಲ್ಲಿ ಗೆಲುವು ತಂದುಕೊಡಿ. ಉಳಿದ ಎಲ್ಲಾ ಲೆಕ್ಕಾಚಾರ ನನಗೆ ಬಿಟ್ಟುಬಿಡಿ. ಆಗಸ್ಟ್ ನಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದನ್ನು ನೀವೇ ನೋಡುವಿರಿ ಎಂದಿದ್ದಾರೆ. ಅಷ್ಟೇ ಅಲ್ಲ, ಈಗ ಯಾರು ತೆಪ್ಪಗೆ ಕೆಲಸ ಮಾಡದೆ ಇರುತ್ತೀರೋ ಅವರು ಆಗಲೂ ಹಾಗೆ ತೆಪ್ಪಗೆ ಕೂರಬೇಕಾಗುತ್ತದೆ ಎಂದಿದ್ದಾರೆ. ಇದರ ಅರ್ಥ ಆಗಸ್ಟ್ ನಲ್ಲಿ ರಾಜ್ಯ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರುವ ಮತ್ತೊಂದು ಪ್ರಯತ್ನ ಮಾಡಲಿದೆ ಅನ್ನೋ ಮುನ್ಸೂಚನೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ. ಅಮಿತ್ ಶಾ ಸೂಚನೆ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಹೊಸ ಬಾಂಬ್ ಹಾಕಿದ್ದು, ಅಮಿತ್ ಶಾ ಸೂಚನೆ ಸತ್ಯ ಮಾಡಲು ಹುನ್ನಾರ ಮಾಡಿದಂತಿದೆ.

ಬೀದರ್‌ನಲ್ಲಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22 ಸ್ಥಾನಗಳಲ್ಲಿ ಗೆಲುವು ತಂದು ಕೊಡಿ, ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರ್ಕಾರವನ್ನು ಒಂದೇ ದಿನದಲ್ಲಿ ಇರದಂತೆ ಮಾಡ್ತೇವೆ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದಾರೆ.

ಬಿಎಸ್ ಯಡಿಯೂರಪ್ಪ ಮಾತಿಗೆ ಜೆಡಿಎಸ್‌, ಕಾಂಗ್ರೆಸ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಮಾತನಾಡಿ, ಆಪರೇಷನ್ ಕಮಲ ಮಾಡಲು ಹೋಗಿ ಇಷ್ಟೆಲ್ಲಾ ರಗಳೆ ಆದರೂ ಅಧಿಕಾರದ ಲಾಲಸೆ ಹೋಗಿಲ್ಲ. ಯಡಿಯೂರಪ್ಪ ಸಿಎಂ ಆಗ್ತೇನೆ ಎಂದು ಕನಸು ಕಾಣುತ್ತಲೇ ಇದ್ದಾರೆ ಎಂದು ಟೀಕಿಸಿದ್ದಾರೆ. ಗೃಹ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಬಿಎಸ್ ಯಡಿಯೂರಪ್ಪ ಜನವರಿ, ಫೆಬ್ರವರಿ ಏಪ್ರಿಲ್ ಅಂತಾ ಗಡುವು ನೀಡುತ್ತಲೇ ಬಂದಿದ್ದಾರೆ. ಅವರ ಸ್ಥಿತಿ ಕಂಡರೆ ನನಗೆ ಬೇಸರವಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ಬಿಜೆಪಿ 22 ಸ್ಥಾನಗಳು ಬಂದರೆ ಸರ್ಕಾರ ರಚನೆ ಮಾಡುವ ಕಸರತ್ತು ಮಾಡ್ತೇವೆ ಎಂದು ಬಹಿರಂಗವಾಗಿ ಹೇಳಿದೆ. 22 ಸ್ಥಾನ ಬಂದರೆ ಸರ್ಕಾರ. ಇಲ್ಲದಿದ್ದರೆ ಕೆಲವರು ತೆಪ್ಪಗಿರಬೇಕಾಗುತ್ತೆ ಎಂದರೆ ಬಿಎಸ್‌ವೈ ಏನಾದರೂ ರಾಜಕೀಯ ನಿವೃತ್ತಿ ಘೋಷಿಸಬೇಕಾಗುತ್ತಾ ಅನ್ನೋ ಬಗ್ಗೆಯೂ ಚರ್ಚೆ ಶುರುವಾಗಿದೆ..!

Leave a Reply