ಲೋಕಸಭೆಗೆ ಮೈತ್ರಿಯಲ್ಲಿ ಸ್ಥಾನ ಬಿಕ್ಕಟ್ಟು..?

ಡಿಜಿಟಲ್ ಕನ್ನಡ ಟೀಮ್:

ಕಳೆದ ವಿಧಾನಸಭೆಯಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದ ಕಾಂಗ್ರೆಸ್, ಜೆಡಿಎಸ್‌ ಕೆಲವೊಂದು ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ಸೇರಿದಂತೆ ಎಲ್ಲವನ್ನೂ ಹಂಚಿಕೆ ಮಾಡಿಕೊಂಡಿದ್ರು. ಇದೀಗ ಲೋಕಸಭಾ ಚುನಾವಣಾ ಸಮರ ಸಮಯ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಂದ ಅಭ್ಯರ್ಥಿಗಳು ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದು ಮೈತ್ರಿ ಪಕ್ಷಗಳಲ್ಲಿ ಬಿಕ್ಕಟ್ಟು ಉಂಟಾಗಿದೆ.

ಇವತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್, ಸಚಿವ ಹೆಚ್.ಡಿ ರೇವಣ್ಣ ಪ್ರಾಥಮಿಕವಾಗಿ ಮಾತುಕತೆ ನಡೆಸಿದ್ರು. ಯಾವೆಲ್ಲಾ ಕ್ಷೇತ್ರಗಳಲ್ಲಿ ಯಾರ‌್ಯಾರ ಪ್ರಾಬಲ್ಯವಿದೆ ಅನ್ನೋ ಬಗ್ಗೆ ಚರ್ಚೆ ನಡೆಸಿದ್ರು. ನಂತರ ಮಾತನಾಡಿದ ಸಚಿವ ಹೆ‌ಚ್.ಡಿ ರೇವಣ್ಣ, ಮೊದಲ ಹಂತದ ಮಾತುಕತೆ ನಡೆಸಿದ್ದೇವೆ, ಆ ಬಳಿಕ ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ಇವತ್ತಿನ ಚರ್ಚೆ ಉತ್ರಮವಾಗಿತ್ತು. ಇನ್ನೂ ಸ್ಥಾನ ಹಂಚಿಕೆ ನಿರ್ಧಾರಕ್ಕೆ ಬಂದಿಲ್ಲ. ಸದ್ಯದಲ್ಲೇ ಟಿಕೆಟ್ ಹಂಚಿಕೆ ಫೈನಲ್ ಮಾಡ್ತೀವಿ ಎಂದಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಸಭೆ ಬೆನ್ನಲ್ಲೇ ಮಂಡ್ಯದ ಸಚಿವರು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿ.ಎಸ್ ಪುಟ್ಟರಾಜು, ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಕಾಂಗ್ರೆಸ್ ಜೊತೆ ಮೈತ್ರಿ ಆಗಲಿ, ಆಗದೇ ಇರಲಿ ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನ ಬಿಟ್ಟುಕೊಟ್ಟಿತ್ತು, ಈಗ ಕಾಂಗ್ರೆಸ್‌ನಿಂದ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ, ನಾವಂತು ಅಭ್ಯರ್ಥಿ ಹಾಕ್ತೇವೆ ಎಂದು ಗುಡುಗಿದ್ದಾರೆ. ಅತ್ತ ಮಂಡ್ಯದಲ್ಲಿ ಮಾತನಾಡಿದ ಸಚಿವ ಡಿ.ಸಿ ತಮ್ಮಣ್ಣ, ಸುಮಲತಾ ಅಂಬರೀಶ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟುವ ಪ್ರಶ್ನೆಯೇ ಇಲ್ಲ. ನಮ್ಮ ಏಳು ಜನ ಶಾಸಕರು ಇಲ್ಲಿ ಗೆದ್ದಿದ್ದಾರೆ. ನಮ್ಮ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಒಂದು ವೇಳೆ ಸುಮಲತಾ ಅವರನ್ನು ಜೆಡಿಎಸ್ ಪಕ್ಷಕ್ಕೆ ನಮ್ಮ ವರಿಷ್ಠರು ಕರೆದುಕೊಂಡರೆ ಅವರ ಪರವಾಗಿಯೇ ಕೆಲಸ ಮಾಡ್ತೇವೆ ಎಂದಿದ್ದಾರೆ.

ಒಟ್ಟಾರೆ ಕಾಂಗ್ರೆಸ್, ಜೆಡಿಎಸ್ ಸಭೆಯಲ್ಲಿ ಹೆಚ್‌.ಡಿ ರೇವಣ್ಣ 12 ಸ್ಥಾನಗಳನ್ನು ಕೇಳಿದ್ದು, ಕನಿಷ್ಠ 10 ಸ್ಥಾನಗಳನ್ನಾದರೂ ಬಿಟ್ಟು ಕೊಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದ್ದು, ಜೆಡಿಎಸ್ ಕೆಂಡಾಮಂಡಲ ಆಗಿದೆ. ಇನ್ನು ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡ್ತೇವೆ ಅನ್ನೋ ಮಾತನ್ನಾಡುತ್ತಿದ್ದ ಕಾಂಗ್ರೆಸ್, ಸುಮಲತಾ ಗೆಲುವಿನ ಸನಿಹ ಬರುತ್ತಾರೆ ಅನ್ನೋದು ಗೊತ್ತಾಗ್ತಿದ್ದ ಹಾಗೆ ಮಂಡ್ಯವನ್ನು ನಮಗೆ ಬಿಟ್ಟುಕೊಟ್ಟು ಹಾಸನದಿಂದ ನೀವು ಸ್ಪರ್ಧೆ ಮಾಡಿ ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಭೆ ಬೆನ್ನಲ್ಲೇ ಮಂಡ್ಯದ ಇಬ್ಬರು ಸಚಿವರು ಉಗ್ರ ರೂಪ ತಾಳಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ವಾರ್ ನಡೀತಿದ್ದು, ಹೇಗೆ ನಿಬಾಯಿಸುತ್ತಾರೆ ಕಾದು ನೋಡ್ಬೇಕು.

Leave a Reply