ಗಡಿಯಲ್ಲಿ ಹೈಅಲರ್ಟ್: ರಜೆಯಲ್ಲಿದ್ದ ಯೋಧರಿಗೆ ಮರಳಲು ಕರೆ, ಪ್ರಧಾನಿ ಮೋದಿ ತುರ್ತು ಸಭೆ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಪಾಕ್ ಭಾರತದ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಗಡಿ ಭಾಗದಲ್ಲಿನ ಬೆಳವಣಿಗೆಗಳು ತೀವ್ರಗೊಳ್ಳುತ್ತಿವೆ. ಪರಿಣಾಮ ಭಾರತೀಯ ಭದ್ರತಾ ಪಡೆಗಳು ಹೈಅಲರ್ಟ್ ಘೋಷಣೆ ಮಾಡಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ತುರ್ತು ಸಭೆ ಕರೆದಿದ್ದಾರೆ.

ಪಾಕಿಸ್ತಾನ ಭಾರತೀಯ ವಾಯುಗಡಿ ದಾಟಿ ದಾಳಿ ನಡೆಸುವ ಪ್ರಯತ್ನಕ್ಕೆ ಮುಂದಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದಾರೆ.

ದೆಹಲಿಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತಮಟ್ಟದ ತುರ್ತು ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸೈನಿಕರು ಪಾಕಿಸ್ತಾನದ ಎಫ್-16 ನ್ನು ಹೊಡೆದುರುಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣಗಳು, ಪಠಾಣ್ ಕೋಟ್ ನ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ರಜೆಯಲ್ಲಿರುವ ಯೋಧರಿಗೆ ಕೂಡಲೇ ವಾಪಸ್ ಸೇವೆಗೆ ಹಾಜರಾಗುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇನ್ನು ಯಾವುದೇ ಕ್ಷಣದಲ್ಲಿ ಟೇಕ್ ಆಫ್ ಆಗಲು ಸಿದ್ಧವಾಗಿರುವಂತೆ ವಾಯುಪಡೆಗೆ ಸೂಚನೆ ನೀಡಲಾಗಿದ್ದು, ಯಲಹಂಕ ವಾಯುನೆಲೆಯಿಂದ ಯುದ್ಧವಿಮಾನಗಳನ್ನು ಗಡಿ ಭಾಗಕ್ಕೆ ರವಾನೆ ಮಾಡಲು ಸೂಚನೆ ನೀಡಲಾಗಿದೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ ನಾಗರಿಕರ ರಕ್ಷಣೆಗೆ ಕ್ರಮ ಕೈಗೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಸಿಆರ್ ಪಿಎಫ್ ಗೆ ಸೂಚನೆ ನೀಡಿದ್ದು, ಆಸ್ಪತ್ರೆಗಳಲ್ಲಿ ಔಷಧಗಳ ಸಂಗ್ರಹಣೆಗೆ ಸೂಚನೆ ನೀಡಲಾಗಿದೆ. ಪಾಕಿಸ್ತಾನ ಭಾರತೀಯ ವಾಯುಗಡಿಯನ್ನು ಉಲ್ಲಂಘನೆ ಮಾಡಿ, ಸೇನೆಯನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಯತ್ನಿಸಿರುವ ಬೆನ್ನಲ್ಲೇ ಪ್ರಧಾನಿ ಮೋದಿ ನಿವಾಸದಲ್ಲಿ ತುರ್ತು ಸಭೆ ನಡೆಯುತ್ತಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

Leave a Reply