ಮೋದಿಗೆ ಸಹಾಯ ಆಗುತ್ತಾ ಪಾಕ್ ಮೇಲಿನ ದಾಳಿ..?

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಮೇಲೆ ಭಾರತೀಯ ವಾಯುಪಡೆ ಅಟ್ಯಾಕ್ ಮಾಡಿದೆ. ಅದರೊಂದಿಗೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 40 ಜನ ಭಾರತೀಯ ಯೋಧರನ್ನು ಹತ್ಯೆಗೆ ಭಾರತ ಸೇಡು ತೀರಿಸಿಕೊಂಡಿದೆ. ಬರೋಬ್ಬರಿ 300 ಉಗ್ರರು ಹತರಾಗಿದ್ದಾರೆ ಎಂದು ಭಾರತ ಹೇಳಿಕೊಳ್ಳುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತ ದಾಳಿ ಮಾಡಿದ್ದು ಸತ್ಯ. ಆದ್ರೆ ನಮ್ಮ ಸೇನಾಪಡೆ ತಿರುಗೇಟು ನೀಡಲು ಮುಂದಾಗ್ತಿದ್ದ ಹಾಗೆ ಭಾರತೀಯ ಯುದ್ಧ ವಿಮಾನ ವಾಪಸ್ ಆಯ್ತು. ಈ ವೇಳೆ ದಟ್ಟ ಅರಣ್ಯದಲ್ಲಿ ಬಾಂಬ್ ಎಸೆದು ಹೋಗಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ. ಈ ನಡುವೆ ಭಾರತೀಯ ಸೇನೆ ಗಡಿರೇಖೆ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದೆ.

ಜೊತೆಗೆ ಭಾರತದಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಮತಗಳಿಸುವ ಹುನ್ನಾರವನ್ನು ಆಡಳಿರೂಢ ಸರ್ಕಾರ ಮಾಡ್ತಿದೆ ಎಂದು ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಇಮ್ರಾನ್ ಹೇಳಿಕೆ ಬೆನ್ನಲ್ಲೇ ರಾಜಸ್ಥಾನದ ಚುರುವಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸೇನಾ ಕಾರ್ಯಾಚರಣೆ ಬಗ್ಗೆ ಒಂದಕ್ಷರವನ್ನೂ ನೇರವಾಗಿ ಪ್ರಸ್ತಾಪ ಮಾಡಲಿಲ್ಲ. ಆದರೆ ಎಲ್ಲಾ ವಿಚಾರಗಳನ್ನು ಪರೋಕ್ಷವಾಗಿ ಹೇಳುವ ಮೂಲಕ ಎದೆತಟ್ಟಿಕೊಂಡರು. ನಮ್ಮ ದೇಶದ ವೀರ ಯೋಧರಿಗೆ ಈ ಪ್ರಧಾನ ಸೇವಕನ ನಮಗಳು ಎಂದ ಪ್ರಧಾನಿ, ಎಂದೆಂದಿಗೂ ಭಾರತ ಮಾತೆ ತಲೆತಗ್ಗಿಸಲು ಬಿಡೋದಿಲ್ಲ ಎಂದು ಅಭಯ ನೀಡುತ್ತೇನೆ. ದೇಶದ ಆಡಳಿತವು ಸುರಕ್ಷಿತ ಕೈಗಳಲ್ಲಿ ಇದೆ. ಭಾರತ ಮಾತೆ ಮೇಲೆ ಪ್ರಮಾಣ ಮಾಡ್ತೇನೆ ಈ ದೇಶ ನಾಶವಾಗಲು ಬಿಡೋದಿಲ್ಲ. ನಾನು ಹೇಳಿದ್ದನ್ನು ಮಾಡಿ ತೋರಿಸಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸಂಸತ್ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದ ವಿರೋಧ ಪಕ್ಷಗಳು ಸಾಕಷ್ಟು ವಿಚಾರಗಳನ್ನು ಎತ್ತಿಕೊಂಡು ಎನ್‌ಡಿಎ ಮೈತ್ರಿಕೂಟದ ವಿರುದ್ಧ ಹೋರಾಡಲು ಸಜ್ಜಾಗಿದ್ದರು. ಮಹಾಘಟಬಂಧನ್ ಎನ್‌ಡಿಎ ಮೈತ್ರಿಕೂಟದ ನಿದ್ರೆಗೆಡಿಸಿತ್ತು ಅನ್ನೋದು ಸುಳ್ಳಲ್ಲ. ಇದೀಗ ಪಾಕಿಸ್ತಾನ ಮೂಲದ ಉಗ್ರರು ಸೇನೆ ಮೇಲೆ ದಾಳಿ ಮಾಡಿದ್ದು, ನಂತರ ಭಾರತೀಯ ಸೇನೆ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿ 300 ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿರುವುದು ಬಿಜೆಪಿ ಪಾಲಿಗೆ ವರದಾನ ಎಂದರೂ ತಪ್ಪಲ್ಲ. ಈಗಾಗಲೇ ಚುನಾವಣೆಗೆ ರಾಷ್ಟ್ರೀಯತೆ, ದೇಶಭಕ್ತಿ, ದೃಢ ನಾಯಕತ್ವ ಎನ್ನುವ ಮೂಲಕ ಬಿಜೆಪಿ ನಾಯಕರು ಬೇರೆಲ್ಲಾ ಚುನಾವಣಾ ವಿಚಾರಗಳನ್ನು ಬದಿಗೆ ಸರಿದಿದ್ದು, ವಿರೋಧಪಕ್ಷಗಳಿಗೆ ದಿಕ್ಕೆಟ್ಟಂತಾಗಿದೆ. ಪಾಕಿಸ್ತಾನ ವಿರುದ್ಧ ಸಂಭ್ರಮದ ಹೆಸರಲ್ಲಿ ಮೋದಿಯನ್ನು ಕೊಂಡಾಡಲಾಗುತ್ತಿದೆ. ದೇಶದ ವಿಚಾರದಲ್ಲಿ ಸೇನಾ ಕಾರ್ಯವನ್ನು ವಿರೋಧಿಸಲು ಸಾಧ್ಯವೇ ಇಲ್ಲ. ಚುನಾವಣೆಗೆ ಲಾಭ ಮಾಡಿಕೊಳ್ಳುತ್ತಿರುವ ಮೋದಿಯನ್ನು ಟೀಕಿಸಲು ಹೋಗಿ ಉಲ್ಟಾ ಪರಿಣಾಮ ಬೀರಿದರೆ ಅನ್ನೋ ಇಕ್ಕಟ್ಟಿನ ಪರಿಸ್ಥಿತಿಗೆ ವಿರೋಧ ಪಕ್ಷಗಳು ಸಿಲುಕಿವೆ. ಆದ್ರೆ ಬಿಜೆಪಿಯ ಮತಗಳಿಸುವ ಯೋಜನೆ ಯಾವ ರೀತಿ ಯಶಸ್ಸು ಗಳಿಸುತ್ತೆ ಕಾದು ನೋಡಬೇಕು.

Leave a Reply