ಭಾರತ- ಪಾಕ್ ಬಿಕ್ಕಟ್ಟು: ಲೋಕಸಭಾ ಚುನಾವಣೆ ಮೇಲೆ ಬೀಳುತ್ತಾ ಎಫೆಕ್ಟ್?

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳ ಮೇಲೆ ವೈಮಾನಿಕ ದಾಳಿ, ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಪ್ರಯತ್ನ… ಈ ಎಲ್ಲ ಬೆಳವಣಿಗೆಗಳು ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ವಾತಾವರಣ ನಿರ್ಮಾಣವಾಗಿದೆ.

ಈಗಾಗಲೇ ಯುದ್ಧಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಪಾಕಿಸ್ತಾನ ಮಾಡಿಕೊಂಡಿದ್ದು, ಪ್ರಮುಖ ಏರ್‌ಪೋರ್ಟ್‌ಗಳನ್ನು ಖಾಲಿ ಮಾಡಿಸಿಟ್ಟುಕೊಂಡಿದೆ. ಇನ್ನು ಭಾರತ ಕೂಡ ಯುದ್ಧಕ್ಕೆ ಸರ್ವಸನ್ನದ್ಧವಾಗಿದ್ದು ದೆಹಲಿ ಬಿಟ್ಟು ಮೇಲ್ಭಾಗದ ಎಲ್ಲಾ ವಿಮಾನ ನಿಲ್ದಾಣಗಳನ್ನು ಮುಂದಿನ 1 ತಿಂಗಳ ಕಾಲ ಸ್ಥಗಿತ ಮಾಡಿ ಆದೇಶ ಮಾಡಲಾಗಿದೆ. ರಾಜಸ್ಥಾನ, ಪಂಜಾಬ್, ಉತ್ತರಖಂಡ, ಹರಿಯಾಣ ಮತ್ತು ಜಮ್ಮು ಕಾಶ್ಮೀರಗಳ ವಿಮಾನ‌ ನಿಲ್ದಾಣಗಳನ್ನು ಮುಂದಿನ ತಿಂಗಳು 17 ರವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಆದೇಶ ಮಾಡಿದೆ. ರಜೆ ಮೇಲೆ ತೆರಳಿರುವ ಸೈನಿಕರು ಕೂಡಲೇ ವಾಪಸ್ ಬರಬೇಕೆಂದು ಸೂಚನೆ ಕೊಟ್ಟಿದೆ. ಯಲಹಂಕ ವಾಯುನೆಲೆಯಲ್ಲಿದ್ದ 53 ಫೈಟರ್ ಜೆಟ್‌ಗಳು ಈಗಾಗಲೇ ಗ್ವಾಲಿಯರ್‌ಗೆ ತೆರಳಿವೆ.

ಈ ಎಲ್ಲ ಬೆಳವಣಿಗೆಗಳು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀಳಲಿದೆ. ಅದು ಹೇಗೆಂದರೆ…

ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗಬೇಕು. ಆದರೆ ಈಗಿನ ಸ್ಥಿತಿ ನೋಡಿದರೆ ಈಗ ಚುನಾವಣೆ ನಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು. ಒಂದು ದೇಶದಲ್ಲಿ ಯುದ್ಧ ಶುರುವಾದರೆ ಬೇರೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತ ಮಾಡುವ ಅವಕಾಶವಿದೆ. ಅದೇ ರೀತಿ ಚುನಾವಣೆ ಎಂದಾಗಲು ಸಾಕಷ್ಟು ಆರ್ಥಿಕ ವೆಚ್ಚ ಮಾಡಬೇಕಾಗುತ್ತದೆ. ಯುದ್ಧ ಮಾಡಿಕೊಂಡು ಜೊತೆ ಜೊತೆಗೆ ಚುನಾವಣೆಯನ್ನೂ ನಡೆಸುವುದು ಸ್ವಲ್ಪ ರಿಸ್ಕ್ ಜಾಸ್ತಿ ಇರುತ್ತದೆ. ಈ ಸ್ಥಿತಿಯಲ್ಲಿ ಚುನಾವಣಾ ಆಯೋಗ ಏಕಾಏಕಿ ಚುನಾವಣೆ ಘೋಷಣೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಇಂತಿಷ್ಟು ದಿನಗಳ ಕಾಲ ಚುನಾವಣೆ ಮುಂದೂಡಬಹುದು. ಮೇ ಅಂತ್ಯದವರೆಗೂ ಈಗಿನ ಸರ್ಕಾರಕ್ಕೆ ಅವಕಾಶವಿದ್ದು, ಅಲ್ಲಿಯವರೆಗೂ ಇದೇ ಸರ್ಕಾರವನ್ನು ಮುಂದುವರಿಸಿ ನಂತರ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಬಹುದು. ಇಲ್ಲ ಸಾಧ್ಯತೆಗಳು ಸಾಧ್ಯ ನಿರ್ಮಾಣವಾಗಿರುವ ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಎಷ್ಟು ದಿನ ಮುಂದುವರಿಯಲಿದೆ ಎಂಬುದರ ಮೇಲೆ ನಿಂತಿದೆ.

ಒಂದು ವೇಳೆ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಚುನಾವಣೆ ನಿಗದಿಯಂತೆ ನಡೆಯಲಿದೆ. ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಅದು ಚುನಾವಣೆ ವಿಳಂಭಕ್ಕೆ ಕಾರಣವಾಗಬಹುದು.

Leave a Reply