ತಾಯ್ನಾಡಿಗೆ ಮರಳಿದ ವೀರಪುತ್ರ ಅಭಿನಂದನ್! ದೇಶದೆಲ್ಲೆಡೆ ಸಂಭ್ರಮ!

ಡಿಜಿಟಲ್ ಕನ್ನಡ ಟೀಮ್:

ಭಾರತದ ಮೇಲೆ ದಾಳಿ ಮಾಡಲು ಬಂದಿದ್ದ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದು ಹಾಕಿ ಪಾಕಿಸ್ತಾನ ಸೈನಿಕರ ವಶಕ್ಕೆ ಸಿಲುಕಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ತಾಯ್ನಾಡಿಗೆ ಮರಳಿದ್ದಾರೆ.

ಪಾಕಿಸ್ತಾನದ ಅಟ್ಟಾರಿ ಹಾಗೂ ಭಾರತದ ವಾಘಾ ಗಡಿಯ ಮೂಲಕ ರಾತ್ರಿ 9.20ರ ಸುಮಾರಿಗೆ ಅಭಿನಂದನ್ ಅವರನ್ನು ಪಾಕಿಸ್ತಾನ ಕಳುಹಿಸಿಕೊಟ್ಟಿದೆ. ಸಂಜೆಯಿಂದಲೇ ಗಡಿಯಲ್ಲಿ ಅಭಿನಂದನ್ ಗಾಗಿ ಸಾವಿರಾರು ಜನ ಕಾಯುತ್ತಿದ್ದರು. ಆದರೆ ಬಿಡುಗಡೆಗೆ ಸಂಬಂಧಿಸಿದ ಪತ್ರ ವ್ಯವಹಾರ ತಡವಾದ ಹಿನ್ನೆಲೆಯಲ್ಲಿ ಅಭಿನಂದನ್ ಮರಳುವುದು ತಡವಾಯಿತು.

ದೇಶದ ರಕ್ಷಣೆ ವೇಳೆ ಶತ್ರು ರಾಷ್ಟ್ರದ ಕೈಗೆ ಸಿಕ್ಕರು ತನ್ನ ತಾಯ್ನಾಡಿನ ಕುರಿತು ಕಿಂಚಿತ್ತು ಮಾಹಿತಿಯನ್ನು ಬಿಟ್ಟು ಕೊಡದೇ ಅಭಿನಂದನ್ ಪಾಕ್ ಯೋಧರ ಪ್ರಶ್ನೆಯನ್ನು ಛಲವಾಗಿ ಎದುರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿನಂದನ್ ಈಗ ದೇಶದ ಜನರ ಪಾಲಿಗೆ ಹೀರೊ ಆಗಿದ್ದಾರೆ.

ಅಭಿನಂದನ್ ಅವರನ್ನು ಸ್ವಾಗತಿಸಲು ಸಾವಿರಾರು ಜನರು ವಾಘಾ ಗಡಿ ಬಳಿ ಜಮಾಯಿಸಿದ್ದರು. ಜೈಕಾರ ಕೂಗಿದರು.

Leave a Reply