ಭಾರತದ ಮೇಲೆ ದಾಳಿ ಮಾಡುವ ಆತುರದಲ್ಲಿ ಪಾಕಿಸ್ತಾನ ಮಾಡಿದ ಪ್ರಮಾದ ಏನು?

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತದ ವಾಯು ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಭರದಲ್ಲಿ ಪಾಕಿಸ್ತಾನ ಮಹಾ ಅಪರಾಧವನ್ನು ಮಾಡಿದೆ. ಆದರ ಪರಿಣಾಮವಾಗಿಯೇ ಈಗ ಪಾಕಿಸ್ತಾನ ತನ್ನ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ ವರ್ತಮಾನ ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಲು ಮುಂದಾಗಿದೆ. ಹಾಗಾದರೆ ಪಾಕ್ ಮಾಡಿರುವ ಪ್ರಮಾದ ಏನು ಎಂಬುದನ್ನು ನೋಡೋಣ ಬನ್ನಿ.

ಬುಧವಾರ ಬೆಳಗ್ಗೆ ಏಕಾಏಕಿ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ 10 ಕಿ.ಮೀ. ವ್ಯಾಪ್ತಿಯೊಳಗೆ ಬಂದು ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಮುಂದಾದವು. ಆದರೆ ಭಾರತದ ಪ್ರತ್ಯುತ್ತರಕ್ಕೆ ಬೆದರಿ ಹಿಂದಕ್ಕೆ ಓದಿದವು. ಪಾಕಿಸ್ತಾನ ಈ ದಾಳಿಗೆ ಅಮೆರಿಕದ ಎಫ್ 16 ಯುದ್ಧ ವಿಮಾನ ಬಳಸಿದ್ದೇ ಈಗ ಪಾಕಿಸ್ತಾನದ ಬುಡ ಅಲ್ಲಾಡುವಂತಾಗಿದೆ.

ಹೌದು, ಅಮೆರಿಕದ ಅತ್ಯಾಧುನಿಕ ಎಫ್ 16 ಯುದ್ಧ ವಿಮಾನವನ್ನು ಪಾಕಿಸ್ತಾನಕ್ಕೆ ನೀಡಿದ್ದು, ಅಲ್ಲಿರುವ ಭಯೋತ್ಪಾದಕರನ್ನು ಸದೆಬಡಿಯುವ ಉದ್ದೇಶಕ್ಕೆ. ಆದರೆ, ಪಾಕಿಸ್ತಾನ ಭಾರತದ ಮೇಲಿನ ದಾಳಿಗೆ ಎಫ್ 16 ಬಳಕೆ ಮಾಡಿಕೊಂಡಿರುವುದು ಅಮೆರಿಕ ಜತೆಗಿನ ಒಪ್ಪಂದ ಉಲ್ಲಂಘನೆಯಾಗಿದೆ. ಇದು ಸಹಜವಾಗಿಯೇ ಪಾಕಿಸ್ತಾನದ ಮೇಲೆ ಅಮೆರಿಕ ಕಣ್ಣು ಕೆಂಪಾಗಿಸಿದೆ.

ಇನ್ನು ಅಭಿನಂದನ ಅವರ ಸೆರೆ ವಿಚಾರಕ್ಕೆ ಬರುವುದಾದರೆ, ಅಭಿನಂದನ ಅವರನ್ನು ಸೆರೆ ಹಿಡಿಯಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರ ಹಾಗೂ ಕಾರಣವಿಲ್ಲ ಎಂದು ಭಾರತ ಸ್ಪಷ್ಟ ಸಂದೇಶ ಕಳುಹಿಸಿತ್ತು. ಪಾಕ್ ಆಕ್ರಮಣ ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಅಭಿನಂದನ್ ಪಾಕ್ ಗಡಿ ಪ್ರವೇಶಿಸಿದ್ದರೇ ಹೊರತು ದಾಳಿ ಮಾಡಲು ಅಲ್ಲ. ಹೀಗಾಗಿ ಅವರನ್ನು ಬಂಧನದಲ್ಲಿ ಇತ್ತುಕೊಂಡಿದ್ದೇ ಆದರೆ ಅದು ಜಿನೇವಾ ಒಪ್ಪಂದ ಉಲ್ಲಂಘನೆಯಾಗುತ್ತಿತ್ತು. ಇನ್ನು ಎಫ್ 16 ಯುದ್ಧ ವಿಮಾನ ಬಳಕೆ ಮಾಡಿರುವ ಬಗ್ಗೆ ಭಾರತದ ಬಳಿ ಸಾಕ್ಷ್ಯ ಇದೆ. ಈ ಎಲ್ಲ ಅಂಶಗಳಿಂದ ಪಾಕ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದೇ ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ.

Leave a Reply