ಸಿಎಂ ಪುತ್ರ ನಿಖಿಲ್ ಮಂಡ್ಯ ಬಿಟ್ಟು ಮೈಸೂರಿಗೆ ಶಿಫ್ಟ್..?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ ಅನ್ನೋದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಯ್ತು. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ತೆನೆಹೊತ್ತ ಮಹಿಳೆಗೆ ಉಘೇ ಅಂದಿದ್ರು ಸಕ್ಕರೆ ನಾಡಿನ ಮತದಾರ. ಹಾಗಾಗಿ ಮಂಡ್ಯದಿಂದಲೇ‌ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸಂಸತ್‌ಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ರಾಜಕೀಯ ಎಂಟ್ರಿ ಕೊಡಿಸಲು‌ ಜೆಡಿಎಸ್ ಸಜ್ಜಾಗಿತ್ತು. ಮೊನ್ನೆ ಮೊನ್ನೆ ಮಂಡ್ಯ ಜಿಲ್ಲೆಯಲ್ಲಿ 5 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗೆ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ ಮಾಡಿದ ಬಳಿಕ ನಿಖಿಲ್ ಅವರನ್ನು ಗೆಲ್ಲಿಸಬೇಕು ಎಂದು ಹಾಲಿ ಸಂಸದ ಶಿವರಾಮೇಗೌಡ ಬಹಿರಂಗ ಆಗಿಯೇ ಕರೆ ನೀಡಿದ್ರು. ಸಿಎಂ ಕುಮಾರಸ್ವಾಮಿ ಮಗನ ಗೆಲುವಿಗಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಕೊಟ್ಟಿದ್ದಾರೆ ಅನ್ನೋ ರಾಜಕೀಯ ಆರೋಪಗಳೂ ಕೇಳಿ ಬಂದಿದ್ವು. ಆದ್ರೀಗ‌ ಮಂಡ್ಯದಿಂದ ನಿಖಿಲ್ ಸ್ಪರ್ಧೆ ಮಾಡೋದಿಲ್ಲ ಅನ್ನೋದು ನಿಖಿಲ್ ಮಾತಿನಿಂದಲೇ ಗೊತ್ತಾಗ್ತಿದೆ.

ಶುಕ್ರವಾರ ಮೈಸೂರಿನಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ಸನ್ಮಾನ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಅಥವಾ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸುವಂತೆ ಜೆಡಿಎಸ್ ನಾಯಕರು ಆಗ್ರಹ ಮಾಡಿದ್ರು. ಉಸ್ತುವಾರಿ ಸಚಿವರೂ ಆಗಿರುವ ಜಿ.ಟಿ ದೇವೇಗೌಡ, ಮೈಸೂರಿನಿಂದ ಮಾಜಿ ಪ್ರಧಾನಿ ದೇವೇಗೌಡರನ್ನ ಕಣಕ್ಕಿಳಿಯುವಂತೆ ಬಹಿರಂಗವಾಗಿಯೇ ಒತ್ತಾಯ ಮಾಡಿದ್ರು. ಒಂದು ವೇಳೆ ದೊಡ್ಡವರು ಬರದೇ ಹೋದರೆ ನಿಖಿಲ್ ಕುಮಾರಸ್ವಾಮಿಯನ್ನು ಕಳುಹಿಸಿಕೊಡಿ ನಾವು ಗೆಲ್ಲಿಸಿಕೊಡ್ತಿವಿ ಎಂದು ಸಿಎಂಗೆ ಮನವಿ ಮಾಡಿದ್ರು.

ಜಿ.ಟಿ ದೇವೇಗೌಡರ ಮಾತಿಗೆ ಸಮ್ಮತಿ ಎಂಬಂತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾನು ಸ್ಪರ್ಧೆಗೆ ಸಿದ್ಧವಾಗಿದ್ದೇನೆ, ನನಗೆ ಅವಕಾಶ ಮಾಡಿಕೊಡಿ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ಕೊಟ್ಟಿದ್ದು, ಎಲ್ಲರ ಹುಬ್ಬೇರಿಸಿದೆ. ಮಂಡ್ಯದಿಂದ ಆಯ್ಕೆಯಾಗಲು ಉತ್ಸುಕತೆ ತೋರಿಸಿದ್ದ ನಿಖಿಲ್ ಕುಮಾರಸ್ವಾಮಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಸಿಗುವ ಸಾಧ್ಯತೆಯಿದೆ. ಮಂಡ್ಯದಲ್ಲಿ ಸುಮಲತಾ ಸ್ಪರ್ಧೆಗೆ ಅಣಿಯಾಗಿದ್ದು, ನಿಖಿಲ್ ಸ್ಪರ್ಧೆಗೆ ಅಡ್ಡಿಯಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮೈಸೂರು-ಕೊಡಗು ಕ್ಷೇತ್ರದ ಕಡೆಗೆ ಸಿಎಂ ಗಮನಹರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಿಎಂಗೆ ಅಭಿನಂದನೆ ಹೆಸರಲ್ಲಿ‌ ಮಗನನ್ನು ರಾಜಕೀಯ ದಾರಿ ಸುಗಮ ಮಾಡಿಕೊಡಲು ಯತ್ನಿಸಿದ್ದಾರೆ.

ನಾನು ನಿಮ್ಮ ಸೇವೆ ಮಾಡಲು ಸಿದ್ಧನಿದ್ದೇನೆ ಎಂದು ತಂದೆ ಕುಮಾರಸ್ವಾಮಿ ಮುಂದೇಯೆ ಹೇಳಿಕೆ‌ ನೀಡಿರುವ ನಿಖಿಲ್, ನಾನಿನ್ನೂ ರಾಜಕೀಯದಲ್ಲಿ ಈಗ ಕಣ್ಣು ಬಿಡುತ್ತಿದ್ದೇನೆ. ನಾನೇನಾದರೂ ತಪ್ಪು ಮಾಡಿದ್ರೆ ಕ್ಷಮಿಸಿ. ಆದ್ರೆ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದಿರುವ ನಿಖಿಲ್, ಜನಸೇವೆಗೆ ಹೆಸರಾದ ಕುಟುಂಬದಲ್ಲಿ ಹುಟ್ಟಿ ಜನರ ಸೇವೆ ಮಾಡದೆ ಇರೋಕೆ ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ. ಮತ್ತೆ ಬರ್ತಿನಿ ನಿಮ್ಮ ಜೊತೆ ಇರ್ತಿನಿ. ನನಗೆ ಅವಕಾಶ ಮಾಡಿಕೊಡಿ ಎನ್ನುವ ಮೂಲಕ ಮಂಡ್ಯದಿಂದ ಮೈಸೂರಿಗೆ ಶಿಫ್ಟ್ ಆಗಿದ್ದೇನೆ ಅನ್ನೋದನ್ನು ಮೈಸೂರಿನ ಬಹಿರಂಗ ಸಮಾವೇಶದ ಸಿಎಂ ಪುತ್ರ ನಿಖಿಲ್ ಸ್ಪಷ್ಟಪಡಿಸಿದ್ದಾರೆ.

Leave a Reply