ಮಂಡ್ಯದಲ್ಲಿ ನಿಖಿಲ್​ ಕನ್ಫರ್ಮ್​, ಗೌಡ್ತಿಗೆ ಗೇಟ್​ಪಾಸ್!

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುಯತ್ತಿರೋದು ಮಂಡ್ಯ ಲೋಕಸಭಾ ಕ್ಷೇತ್ರ. ಇದಕ್ಕೆ ಕಾರಣ ಅಂದ್ರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಃ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ. ಅಂತಿಮವಾಗಿ ಈ ಸುದ್ಧಿಗೆ ಕನ್ಫರ್ಮ್​ ಅನ್ನೋ ಮುದ್ರೆ ಜೆಡಿಎಸ್​ ವರಿಷ್ಠರಿಂದ ಬಿದ್ದಿದೆ.

ಇಷ್ಟು ದಿನ ಸ್ಪರ್ಧೆ ಮಾಡ್ತಾರಂತೆ..! ಒತ್ತಾಯ ಕೇಳಿ ಬರುತ್ತಿದೆ ಎನ್ನುತ್ತಿದ್ದ ಜೆಡಿಎಸ್​ ನಾಯಕರು ಇಂದು ಅಂತಿಮವಾಗಿ ಮಂಡ್ಯ ಕ್ಷೇತ್ರದಿಂದ ನಿಖಿಲ್​ ಸ್ಪರ್ಧೆ ಮಾಡ್ತಾರೆ ಅಂತಾ ನೇರವಾಗಿಯೇ ಹೇಳಿದ್ದಾರೆ. ಇನ್ನೂ ಘೋಷಣೆ ಆಗಿಲ್ಲ, ಸ್ಪರ್ಧೆ ಆದ ಬಳಿಕ ನನ್ನ ನಿರ್ಧಾರ ಪ್ರಕಟ ಮಾಡ್ತೀನಿ ಎನ್ನುತ್ತಿದ್ದ ಅಂಬರೀಷ್​ ಪತ್ನಿ ಸುಮಲತಾ ದಿಕ್ಕು ಕಾಣದಂತಾಗಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಿಖಿಲ್​ ಮಂಡ್ಯದಿಂದ ಸ್ಪರ್ಧೆ ಮಾಡೋದನ್ನು ಖಚಿತ ಮಾಡಿದ್ರು. ಪ್ರಜ್ವಲ್​ ರೇವಣ್ಣ ಸ್ಪರ್ಧೆಗೆ ನಾನು ಒಪ್ಪಿಕೊಂಡಿದ್ದೇನೆ. ನಮ್ಮ ತಾತಾ ಕೇವಲ ಪ್ರಜ್ವಲ್​​ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ರು. ನನ್ನ ಸ್ಪರ್ಧೆಗೆ ಒಪ್ಪಲಿಲ್ಲ ಅನ್ನೋ ದೂರನ್ನು ಕೊನೆಗಾಲದಲ್ಲಿ ಹೊತ್ತುಕೊಳ್ಳಲು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ನಾನು ನಿಖಿಲ್​ ಮಂಡ್ಯದಿಂದ ಸ್ಪರ್ಧೆ ಮಾಡ್ತೇನೆ ಎಂದಾಗ ನಾನು ಒಪ್ಪಿಕೊಂಡಿದ್ದೇನೆ ಎನ್ನುವ ಮೂಲಕ ಮಂಡ್ಯದಿಂದ ಲೋಕಸಭೆಗೆ ನಿಖಿಲ್​ ಸ್ಫರ್ಧೆ ಮಾಡ್ತಾರೆ ಅನ್ನೋದನ್ನು ಬಹಿರಂಗ ಮಾಡಿದ್ರು. ಅತ್ತ ಶಿವಮೊಗ್ಗದಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಮಂಡ್ಯದ ಜನ ದೇವೇಗೌಡರ ವಂಶದ ಕುಡಿಯನ್ನು ಅಭ್ಯರ್ಥಿಯಾಗಿ ಮಾಡಬೇಕು ಅನ್ನೋ ಒತ್ತಾಯ ಮಾಡಿದ್ದಾರೆ. ಜನರ ನಿರ್ಧಾರದಂತೆ ಅಭ್ಯರ್ಥಿಯನ್ನು ಹಾಕ್ತೇವೆ ಎಂದಿದ್ದಾರೆ.

ಸುಮಲತಾ ಅಂಬರೀಷ್​ ಅವರ ಅಬ್ಬರದ ಪ್ರಚಾರದ ಬಗ್ಗೆಯೂ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ಕೆಲವರು ಮಂಡ್ಯ ಜನರಿಗಾಗಿ ಬಂದಿದ್ದೇನೆ ಅವರ ಋಣ ತೀರಿಸಲು ಬಂದಿದ್ದೇನೆ ಎಂದೆಲ್ಲಾ ಹೇಳಿಕೊಂಡು ತಿರುಗುತ್ತಿದ್ದಾರೆ. ಆದ್ರೆ ಮಂಡ್ಯ ಜನರಿಗೆ ಯಾರು ಏನೇನು ಋಣ ತೀರಿಸಿದ್ದಾರೆ ಅನ್ನೋದು ಗೊತ್ತಿದೆ ಎಂದಿದ್ದಾರೆ. ಆದರೂ ಪಟ್ಟು ಬಿಡದ ಸುಮಲತಾ, ಕಾಂಗ್ರೆಸ್​ನಿಂದ ಟಿಕೆಟ್​ ಕೇಳಿದ್ದೀನಿ, ಒಂದು ವೇಳೆ ಟಿಕೆಟ್​ ಸಿಗದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ತೇನೆ ಎನ್ನುವ ಮೂಲಕ ಬಿಜೆಪಿ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡೋದನ್ನು ಖಚಿತ ಮಾಡಿದ್ದಾರೆ. ಇನ್ನು ನಿಖಿಲ್​ ಸ್ಪರ್ಧೆ ಬಗ್ಗೆ ಕೇಳಿದ್ರೆ, ಬೇರೆ ಪಕ್ಷದ ಅಭ್ಯರ್ಥಿ ಯಾರು ಅನ್ನೋದು ನನಗೆ ಬೇಕಿಲ್ಲ ಎನ್ನುವ ಮೂಲಕ ಮಂಡ್ಯದಿಂದಲೇ ನಾನು ಜೆಡಿಎಸ್​ ವಿರೋಧಿಸಿ ಸ್ಪರ್ಧೆ ಮಾಡ್ತೀನಿ ಎಂದಿದ್ದಾರೆ. ಕಾಂಗ್ರೆಸ್​ ನಾಯಕರು ಮಾತ್ರ ಬೇರೆ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್​ ಕೊಡ್ತೇವೆ ಎನ್ನುವ ಮೂಲಕ ಮಂಡ್ಯ ಜೆಡಿಎಸ್​ಗೆ ಅನ್ನೋದನ್ನು ಖಚಿತ ಮಾಡಿದ್ದಾರೆ. ಸೋಮವಾರದ ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲವೂ ಅಂತಿಮವಾಗುವ ಸಾಧ್ಯತೆಗಳು ದಟ್ಟವಾಗಿವೆ.

Leave a Reply