ಡಿಜಿಟಲ್ ಕನ್ನಡ ಟೀಮ್:
ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಜನವರಿ 19 ರಾತ್ರಿ ಈಗಲ್ಟನ್ ರೆಸಾರ್ಟ್ನಲ್ಲಿ ಬಡಿದಾಡಿಕೊಂಡಿದ್ದರು. ಆ ಬಳಿಕ ಆನಂದ್ ಸಿಂಗ್ ಆಸ್ಪತ್ರೆ ಸೇರಿದ್ದೂ ಆಯ್ತು.. ಒಂದು ತಿಂಗಳ ಬಳಿಕ ಗುಜರಾತ್ನ ಸೋಮನಾಥದಲ್ಲಿ ಕಂಪ್ಲಿ ಗಣೇಶ್ ಬಂಧನ ಆಗಿದ್ದೂ ಆಯ್ತು. ಅರೆಸ್ಟ್ ಆಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಹೋಗಿದ್ದ ಶಾಸಕ ಕಂಪ್ಲಿ ಗಣೇಶ್, ಜಾಮೀನು ಅರ್ಜಿ ಸಲ್ಲಿಸದೆ ಜೈಲಿನಲ್ಲೇ ವಾಸವಾಗಿದ್ದ ಕಂಪ್ಲಿ ಗಣೇಶ್ ಶನಿವಾರ ಜಾಮೀನು ಪಡೆಯಲು ಜನಪ್ರತಿನಿಧಿಗಳ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಒಂದೈದು ಸೆಕೆಂಡ್ರ ವಿಡಿಯೋ ರಿಲೀಸ್ ಮಾಡಿದ್ದಾರೆ. ಆ ವಿಡಿಯೋ ನೋಡಿದ್ರೆ ಆನಂದ್ ಸಿಂಗ್ ಅರೆಸ್ಟ್ ಆಗ್ತಾರಾ ಅನ್ನೋ ಅನುಮಾನ ಮೂಡುವಂತೆ ಮಾಡಿದೆ.
ಜಾಮೀನು ಅರ್ಜಿ ಸಲ್ಲಿಸಿರುವ ಶಾಸಕ ಕಂಪ್ಲಿ ಗಣೇಶ್ ಕೋರ್ಟ್ ವಿಡಿಯೋ ಸಾಕ್ಷಿಯನ್ನು ಸಲ್ಲಿಕೆ ಮಾಡಿದ್ದಾರೆ. ನಾನು ತಪ್ಪು ಮಾಡಿಲ್ಲ, ಹಲ್ಲೆ ಮಾಡಿದ್ದು ಶಾಸಕ ಆನಂದ್ ಸಿಂಗ್ ಅವರೇ ಎಂದು ಸಾಬೀತು ಮಾಡಬಹುದಾದ ವಿಡಿಯೋ ಸಾಕ್ಷಿ ಕೂಡ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಐದು ಸೆಕೆಂಡ್ ವಿಡಿಯೋ ಮಾಧ್ಯಮಗಳಿಗೂ ಬಿಡುಗಡೆ ಆಗಿದ್ದು, ಅದರಲ್ಲಿ ಶಾಸಕ ಆನಂದ್ ಸಿಂಗ್ ಅವರೇ ಗಣೇಶ್ ಅವರ ಕುತ್ತಿಗೆ ಪಟ್ಟಿ ಹಿಡಿದಿದ್ದು, ಶಾಸಕ ಗಣೇಶ್ ಅಣ್ಣ ಇದು ಸರಿಯಲ್ಲ, ಅಣ್ಣ ಸರಿಯಲ್ಲ ಎಂದಿದ್ದಾರೆ. ಆದ್ರೆ ಆನಂದ್ ಸಿಂಗ್ ಅವಳನ್ನು ನೀನು ನೋಡಿದ್ಯಾ ಎಂದು ಆಕ್ರೋಶಿತವಾಗಿ ಪ್ರಶ್ನಿಸಿದ್ದಾರೆ. ಗಣೇಶ್ ಮಾತ್ರ ಅಣ್ಣ ಅಣ್ಣ ಎಂದೇ ಸಂಬೋಧಿಸಿದ್ದು, ಹಲ್ಲೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿ ಕಾಣ್ತಿಲ್ಲ. ಈ ವಿಡಿಯೋವನ್ನು ಕೋರ್ಟ್ ಒಪ್ಪಿದ್ರೆ ಕಂಪ್ಲಿ ಗಣೇಶ್ ಜೈಲಿನಿಂದ ಹೊರಬರಲಿದ್ದಾರೆ. ಆದ್ರೆ ಆನಂದ್ ಸಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜೈಲು ಪಾಲಾಗ್ತಾರಾ ಅನ್ನೋ ಅನುಮಾನ ಹುಟ್ಟು ಹಾಕಿದೆ.
ಕಂಪ್ಲಿ ಶಾಸಕ ಗಣೇಶ್ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಆನಂದ್ ಸಿಂಗ್ ನನ್ನ ಜಾತಿಯನ್ನು ಹಿಯ್ಯಾಳಿಸಿದ್ದಾರೆ, ಆ ವೇಳೆ ಸಣ್ಣ ಗಲಾಟೆ ನಡೀತು ಎಂದು ಮಾಧ್ಯಮಗಳ ಎದುರು ಹೇಳಿಕೊಂಡಿದ್ರು. ಇದೀಗ 5 ಸೆಕೆಂಡ್ ವಿಡಿಯೋ ರಿಲೀಸ್ ಆಗಿದ್ದು, ಅದರಲ್ಲಿ ಆನಂದ್ ಸಿಂಗ್ ಅವರೇ ಹಲ್ಲೆ ಮಾಡುವ ರೀತಿ ಇದೆ. ಆನಂದ್ ಸಿಂಗ್ ಅವರ ಮೇಲೆ ಕಂಪ್ಲಿ ಗಣೇಶ್ ಕೌಂಟರ್ ಕೇಸ್ ಹಾಕಿದ್ರೆ, ಆನಂದ್ ಸಿಂಗ್ ಅವರೇ ಜೈಲುಪಾಲಾಗುವ ಸಾಧ್ಯತೆ ಇದೆ. ಆದ್ರೆ ಜಾತಿ ನಿಂದನೆ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಹೇಳಲು ಯಾರಾದರೂ ಸಿದ್ಧರಿದ್ದರೆ ಆನಂದ್ ಸಿಂಗ್ ಅವರ ಕೊರಳಿಗೆ ಸಂಕಷ್ಟ ಸುತ್ತಿಕೊಳ್ಳುವುದು ಮಾತ್ರ ಸತ್ಯ.. ಈಗಾಗಲೇ ಸಂಧಾನಕ್ಕೆ ಸಾಕಷ್ಟು ಯತ್ನ ನಡೆಸಿದ್ದು, ಸಂಧಾನ ವಿಫಲವಾಗಿದೆ. ಒಂದು ವೇಳೆ ಕೋರ್ಟ್ನಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿ, ಸೂಕ್ತ ಸಾಕ್ಷಿಯೂ ಕೋರ್ಟ್ಗೆ ಸಿಕ್ಕಿದ್ರೆ ಆನಂದ್ ಸಿಂಗ್ ಜೈಲುಪಾಲಾಗಲಿದ್ದಾರೆ ಎನ್ನುತ್ತಿವೆ ಕೋರ್ಟ್ ಮೂಲಗಳು.
ಒಟ್ಟಾರೆ ಕಾಂಗ್ರೆಸ್ ಶಾಸಕರ ಕಿತ್ತಾಟ ಲೋಕಸಭಾ ಚುನಾವಣೆ ವೇಳೆ ಮುಜುಗರ ಮಾಡ್ತಿದೆ. ಯಾರು ಅರೆಸ್ಟ್ ಆಗ್ತಾರೆ..? ಯಾರು ರಿಲೀಸ್ ಆಗ್ತಾರೆ ಅನ್ನೋದಕ್ಕೆ ಶೀಘ್ರದಲ್ಲೇ ಉತ್ತರವೂ ಸಿಗಲಿದೆ.