ನಾವು ಕೊಟ್ಟ ಏಟು ಹೇಗಿತ್ತು ಎಂಬುದಕ್ಕೆ ಇಮ್ರಾನ್ ನಡೆಯೇ ಸಾಕ್ಷಿ: ವಾಯುಪಡೆ ಮುಖ್ಯಸ್ಥ

ಡಿಜಿಟಲ್ ಕನ್ನಡ ಟೀಮ್:

‘ನಾವು ಎಲ್ಲಿ ಹೊಡೆಯಬೇಕಿತ್ತೊ ಅಲ್ಲಿಯೇ ಹೊಡೆದಿದ್ದೇವೆ. ಒಂದು ವೇಳೆ ನಮ್ಮ ಗುರಿ ಹಾಗೂ ಏಟು ಪರಿಣಾಮಕಾರಿಯಾಗದಿದ್ದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಏಕೆ ಪ್ರತಿಕ್ರಿಯಿಸುತ್ತಿದ್ದರು? ನಾವು ಕಾಡಿನಲ್ಲಿ ಬಾಂಬ್ ಹಾಕಿದ್ದರೆ ಇಮ್ರಾನ್ ಇಷ್ಟು ಚಿಂತಿತರಾಗುವ ಅಗತ್ಯವಿತ್ತೇ?’ ಇದು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ವಾಯುಪಡೆ ನಡೆಸಿದ ದಾಳಿಯನ್ನು ಪ್ರಶ್ನಿಸಿದವರಿಗೆ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಅವರು ನೀಡಿರುವ ಉತ್ತರ.

ಭಾರತದ ದಾಳಿಯಿಂದ ಪಾಕಿಸ್ತಾನಕ್ಕೆ ಯಾವುದೇ ಪರಿಣಾಮ ಬೀರಿಲ್ಲ ಎಂಬ ಪಾಕ್ ವಾದದ ನಡುವೆಯೇ ದಾಳಿಗೆ ಸಂಬಂಧಿಸಿದ ಸಾಕ್ಷವನ್ನು ರಾಜಕೀಯ ನಾಯಕರು ಕೇಳುತ್ತಿರುವ ಸಂದರ್ಭದಲ್ಲಿ ಧನೋವಾ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತದವಾಯು ದಾಳಿ ನಂತರ ಪಾಕಿಸ್ತಾನ ಹೈ ಅಲರ್ಟ್ ಘೋಷಣೆ ಮಾಡಿದ್ದಲ್ಲದೇ, ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ವೈಮಾನಿಕ ದಾಳಿಗೆ ಮುಂದಾಗಿತ್ತು. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ಮಿಗ್ 21 ಯುದ್ಧ ವಿಮಾನ ಪಾಕಿಸ್ತಾನದ ಎಫ್ 16 ಯುದ್ಧವಿಮಾನವನ್ನೇ ಹೊಡೆದುರುಳಿಸಿತ್ತು. ಈ ದಾಳಿಯ ನಂತರ ಮೊದಲ ಬಾರಿಗೆ ಮಾತನಾಡಿರುವ ಧನೋವಾ ಅವರು ಹೇಳಿದ್ದಿಷ್ಟು…

‘ನಮ್ಮದು ದಾಳಿ ಮಾಡುವುದಷ್ಟೇ ಕೆಲಸ. ದಾಳಿಯಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂದು ಲೆಕ್ಕ ಹಾಕುವುದು ಸರಕ್ರಾದ ಕೆಲಸ. ನಾವು ಪೂರ್ವ ನಿರ್ಧಾರದಂತೆ ನಾವು ಗುರಿಯಾಗಿಸಿದ ಪ್ರದೇಶಗಳ ಮೇಲೆ ದಾಳಿ ಮಾಡಿದ್ದೇವೆ.

ನಾವು ದಾಳಿ ಮಾಡಿದ ನಂತರ ಎದುರಾಳಿ ರಾಷ್ಟ್ರವೂ ಪ್ರತಿದಾಳಿ ನಡೆಸುತ್ತದೆ. ಇದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೆವು. ನಮ್ಮಲ್ಲಿರುವ ಎಲ್ಲ ಯುದ್ಧ ವಿಮಾನಗಳನ್ನು ನಾವು ನಿಯೋಜಿಸಿದ್ದೆವು. ಮಿಗ್ 21 ಯುದ್ಧ ವಿಮಾನವೂ ಅದರಲ್ಲಿ ಒಂದಾಗಿತ್ತೇ ಹೊರತು, ಎಫ್ 16 ಎದುರಾಗಿ ಮಿಗ್ 21 ಅನ್ನು ಮಾತ್ರ ನಿಯೇಜಿಸಿರಲಿಲ್ಲ. ನಮ್ಮಲ್ಲಿರುವ ಎಲ್ಲ ಯುದ್ಧ ವಿಮಾನಗಳು ಎದುರಾಳಿಗಳ ವಿರುದ್ಧ ಸೆಣೆಸಲು ಸಮರ್ಥವಾಗಿದೆ. ಮಿಗ್ 21 ವಿಮಾನವನ್ನು ಮೂರನೇ ತಲೆಮಾರಿನಿಂದ 3.5 ತಲೆಮಾರಿಗೆ ನವೀಕರಿಸಲಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ.

ಅಮೆರಿಕ ಹಾಗೂ ಪಾಕಿಸ್ತಾನದ ನಡುವೆ ಎಫ್ 16 ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಯಾವ ರೀತಿ ಒಪ್ಪಂದವಾಗಿದೆಯೋ ಗೊತ್ತಿಲ್ಲ. ಆದರೆ ಅವರ ಒಂದು ಎಫ್16 ಯುದ್ಧ ವಿಮಾನ ನಷ್ಟವಾಗಿರುವುದು ಸತ್ಯ. ಒಂದು ವೇಳೆ ಒಪ್ಪಂದದಲ್ಲಿ ಎಫ್16 ಅನ್ನು ಬೇರೆ ರಾಷ್ಟ್ರಗಳ ಮೇಲಿನ ದಾಳಿಗೆ ಬಳಸುವಂತಿಲ್ಲ ಎಂದಾದರೆ ಪಾಕಿಸ್ತಾನ ಒಪ್ಪಂದ ಉಲ್ಲಂಘನೆ ಮಾಡಿದೆ. ’

Leave a Reply