ಸುಮಲತಾ ಜಿದ್ದಿಗೆ ಬಿದ್ದು ಸ್ಪರ್ಧೆಗಿಳಿದಿರುವ ಹಿಂದಿದೆಯೇ ಕಾಣದ ಕೈ?

ಡಿಜಿಟಲ್ ಕನ್ನಡ ಟೀಮ್:

ನಟಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಗದೇ ಹೋದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆಯೂ ಚಿಂತನೆ ನಡೆಸಿದ್ದು, ಮುಂದಿನ ಎರಡ್ಮೂರು ದಿನದಲ್ಲಿ ಅಂತಿಮ ನಿರ್ಧಾರ ಮಾಡುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಬಿಡುಸಿನ ಪ್ರಚಾರ ಕೈಗೊಂಡಿರುವ ನಟಿ ಸುಮಲತಾ, ಚುನಾವಣೆಗೆ ಸ್ಪರ್ಧೆ ಮಾಡೋದೇ ಆದ್ರೆ ಅದು ಮಂಡ್ಯ ಕ್ಷೇತ್ರದಲ್ಲಿ ಮಾತ್ರ ಬೇರೆ ಕ್ಷೇತ್ರದಿಂದ ಅವಕಾಶ ಬಂದರೂ ನಾನು ಸ್ಪರ್ಧೆ ಮಾಡೋದಿಲ್ಲ. ಮಂಡ್ಯದಲ್ಲಿ ಜನರ ಋಣ ತೀರಿಸಲು ನಾನು ಬಂದಿದ್ದೇನೆ ಎಂದಿದ್ದಾರೆ. ಜೊತೆಗೆ ಮಂಡ್ಯ ಕ್ಷೇತ್ರದ ಜನರು ನನಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡ್ತಿದ್ದಾರೆ, ನಾನೂ ಸ್ಪರ್ಧೆ ಮಾಡ್ತೇನೆ ಎಂದು ಭರವಸೆ ನೀಡಿದ್ದೇನೆ. ಹಾಗಾಗಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್​ ಸೇರಿದಂತೆ ಬೇರೆ ಪಕ್ಷದಿಂದ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದು ನನಗೆ ಬೇಕಿಲ್ಲದ ವಿಚಾರ ಎನ್ನುವ ಮೂಲಕ ನಾನು ಸ್ಪರ್ಧೆ ಮಾಡಿಯೇ ಸಿದ್ಧ ಎನ್ನುವ ಹಠಕ್ಕೆ ಬಿದ್ದಿದ್ದಾರೆ.

ಜನಸೇವೆ ಮಾಡಬೇಕು ಅನ್ನೋ ಆಸಕ್ತಿ ಬಂದರೆ ಬೇರೆ ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡಿ ಗೆಲುವು ಪಡೆಯಬಹುದು. ಅಥವಾ ಕಾಂಗ್ರೆಸ್​ ಅಭ್ಯರ್ಥಿ ಆಗಿಯೇ ಸ್ಪರ್ಧೆ ಮಾಡ್ಬೇಕು. ಇಲ್ಲದಿದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಆದರೂ ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೇನೆ ಎನ್ನುವ ಸುಮಲತಾ ಅಂಬರೀಷ್​ ಅವರು, ನೇರವಾಗಿ ಜೆಡಿಎಸ್​ ಮುಖ್ಯಸ್ಥರ ಜೊತೆ ಚರ್ಚಿಸಿ ಜೆಡಿಎಸ್​ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬಹುದಲ್ಲ. ಯಾಕೆ ಸುಮಲತಾ ಅವರು ಹಠಕ್ಕೆ ಬಿದ್ದಿದ್ದಾರೆ ಎಂದು ಕಾಂಗ್ರೆಸ್​ ಕಾರ್ಯಕರ್ತರೇ ಮಾತನಾಡಿಕೊಳ್ತಿದ್ದಾರೆ. ಜೆಡಿಎಸ್​ನಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​ ಸ್ಪರ್ಧೆ ಮಾಡ್ತಾರೆ ಅನ್ನೋದು ಕನ್ಫರ್ಮ್​ ಆಗಿದೆ. ಆದು ಗೊತ್ತಿದ್ದರೂ ಸುಮಲತಾ ಮಾತ್ರ ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ ಎನ್ನುವ ಮೂಲಕ ಬಿರುಗಾಳಿಯನ್ನು ಎದುರಿಸಿ ಹೋರಾಟ ಮಾಡ್ತೇನೆ, ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ ಎಂದಿದ್ದಾರೆ. ಇದಕ್ಕೆ ಕಾರಣ ಏನು ಅನ್ನೋ ಚಿಂತೆ ಕಾಂಗ್ರೆಸ್​ ಕಾರ್ಯಕರ್ತರನ್ನ ಕಾಡುತ್ತಿದೆ.

ಅದರಲ್ಲೂ ಸುಮಲತಾ ಅವರೇ ಜೆಡಿಎಸ್​ಗೆ ಬಂದರೆ ಸ್ವಾಗತ ಅವರ ಪರವಾಗಿಯೇ ಕೆಲಸ ಮಾಡ್ತೀನಿ ಎಂದು ಮಂಡ್ಯದ ಸಚಿವದ್ವಯರು ಬಹಿರಂಗ ಆಹ್ವಾನವನ್ನೇ ನೀಡಿದ್ದಾರೆ. ಆದರೂ ಅದರ ಬಗ್ಗೆ ಒಂದೇ ಒಂದು ಮಾತನಾಡದ ಸುಮಲತಾ ನಾನು ಸ್ಪರ್ಧೆ ಮಾಡ್ತೇನೆ ಎಂದಷ್ಟೇ ಹೇಳ್ತಿದ್ದಾರೆ. ಅವರ ಈ ಹಠಕ್ಕೆ ಕಾರಣವೂ ಇದೆ.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಡ್ಯದ 7 ಹಾಗೂ ಕೆ.ಆರ್​ ನಗರ ವಿಧಾನಸಭಾ ಕ್ಷೇತ್ರಗಳು ಸೇರಲಿದ್ದು, ಒಟ್ಟು ಎಂಟೂ ಕ್ಷೇತ್ರಗಳಲ್ಲೂ ಜೆಡಿಎಸ್​ ಶಾಸಕರೇ ಆಯ್ಕೆಯಾಗಿದ್ದಾರೆ. ಸಾ.ರಾ ಮಹೇಶ್​, ಸಿ.ಎಸ್​ ಪುಟ್ಟರಾಜು, ಡಿಸಿ ತಮ್ಮಣ್ಣ ಸೇರಿದಂತೆ ಮೂವರು ಸಚಿವರಾಗಿದ್ದಾರೆ. ಆದರೂ ನಾನು ಕಾಂಗ್ರೆಸ್​ನಿಂದಲೇ ಸ್ಪರ್ಧೆ ಮಾಡ್ತೇನೆ. ಹೊಂದಾಣಿಕೆ ನಡುವೆ ಕಾಂಗ್ರೆಸ್​ಗೆ ಮಂಡ್ಯ ಕ್ಷೇತ್ರದ ಟಿಕೆಟ್​ ಸಿಗದೇ ಹೋದರೆ ಪಕ್ಷೇತರ ಸ್ಪರ್ಧೆ ಬಗ್ಗೆ ಚಿಂತನೆ ಮಾಡ್ತೇನೆ ಎಂದಿದ್ದಾರೆ. ಇಷ್ಟೆಲ್ಲಾ ಸಂಕಷ್ಟಗಳು ಎದುರಾಗುತ್ತೆ ಅನ್ನೋದು ಗೊತ್ತಿದ್ದರೂ ನಾನು ಸ್ಪರ್ಧೆ ಮಾಡ್ತೇನೆ ಎಂದರೆ, ಯಾವುದೋ ಪ್ರಬಲವಾದ ಹಿತಾಸಕ್ತಿ ಇರಬಹುದು ಅನ್ನೋದನ್ನು ಜನರೇ ಊಹೆ ಮಾಡ್ತಿದ್ದಾರೆ. ಅದರಲ್ಲೂ ಮೊದಲಿನಿಂದಲೂ ಹಾಸನ ಅಥವಾ ಮಂಡ್ಯ ಕ್ಷೇತ್ರಗಳ ನಡುವೆ ಒಂದನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಬೇಕು ಎಂದು ವಾದಿಸುತ್ತಲೇ ಇದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ, ತೆರೆಹಿಂದೆ ನಿಂತು ಸೂತ್ರ ಆಡಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗೆ ಎರಡೂವರೆ ಲಕ್ಷದಷ್ಟು ಮತಗಳು ಬಂದಿದ್ವು.

ಈ ಬಾರಿ ಕಾಂಗ್ರೆಸ್​ ನಾಯಕರು ಹಿಂದೆ ನಿಂತು ಬೆಂಬಲ ನೀಡಿದ್ರೆ, ಸುಮಲತಾ ಗೆಲುವು ಸರಳವಾಗಬಹುದು. ಒಂದು ವೇಳೆ ಗೆಲುವು ಸಾಧ್ಯವಾಗದೇ ಇದ್ದರೂ ಸಿಎಂ ಪುತ್ರ ನಿಖಿಲ್​ ಗೆಲವು ಮಾತ್ರ ಅಷ್ಟೊಂದು ಸರಳವಾಗಿ ಇರಲ್ಲ. ಇದೇ ಕಾರಣಕ್ಕಾದರೂ ಸುಮಲತಾ ಅವರನ್ನು ನಿಲ್ಲಿಸಿಯೇ ಸಿದ್ಧ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಯಾರೆಲ್ಲಾ ಇದರ ಹಿಂದಿದ್ದಾರೆ ಎನ್ನುವುದು ಗೊತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿರುವ ಸಾಧ್ಯತೆ ಇದೆ.

Leave a Reply