ದೋಸ್ತಿಗಳಿಂದ ರೈತರಿಗೆ ದ್ರೋಹ! ಕಲಬುರಗಿಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿದ್ದು, ವೈಯಕ್ತಿಕವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ…
ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಭರವಸೆ ನೀಡಲಾಗಿದ್ದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗಿಲ್ಲ. ರಾಜ್ಯದ ರೈತರಿಗೆ ದ್ರೋಹ ಬಗೆಯಲಾಗಿದೆ..
ನಾವು ಕಳೆದ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ನಾವು ಈಡೇರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಿಮಗೆ ಯಾರು ಬೇಕು ಎಂಬುದನ್ನು ಮತದಾರರಾಗಿ ನೀವು ನಿರ್ಧರಿಸಿ…
ಈ ಮೂರು ಅಂಶಗಳು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ಸಾರ್ವನಿಕ ಸಮಾವೇಶದಲ್ಲಿ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ನಡೆಸಿದ ವಾಗ್ದಾಳಿ.

ಕೆಲವೇ ವಾರಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಬುಧವಾರ ಕಲಬುರ್ಗಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಲೋಕಾರ್ಪಣೆಗೊಳಿಸಿದ ಬಳಿಕ ಸಾರ್ವಜನಿಕ ಸಮಾವೇಶ ನಡೆಸುವ ಮೂಲಕ ರಾಜ್ಯದಲ್ಲಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಲ್ಲಿ ಶಾಸಕರಾಗಿದ್ದ ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ಖರ್ಗೆ ಅವರನ್ನು ಅವರ ಕೋಟೆಯಲ್ಲೇ ಮಣಿಸಲು ಮುಹೂರ್ತ ಇಡಲಾಗಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಿಷ್ಟು…

“ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ರೈತರ ಪಟ್ಟಿ ಇನ್ನೂ ಸಿಕ್ಕಿಲ್ಲ. ಹಲವು ರಾಜ್ಯಗಳ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪಿದೆ. ಆದರೆ ರಾಜ್ಯದ ರೈತರಿಗೆ ಇನ್ನೂ ಸಿಕ್ಕಿಲ್ಲ. ಇದಕ್ಕೆಲ್ಲಾ ಕಾರಣ ರಾಜ್ಯದಲ್ಲಿರುವ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಹಾಗೂ ಅಧಿಕಾರ ದಾಹ ಹೊಂದಿರುವ ಕಾಂಗ್ರೆಸ್.

ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ಹಾಕಲಿದೆ. ಅರ್ಹಫಲಾನುಭವಿಗಳನ್ನು ಗುರುತಿಸುವುದು ಮಾತ್ರ ರಾಜ್ಯ ಸರ್ಕಾರದ ಕೆಲಸ. ಕೆಂದ್ರ ಸರ್ಕಾರವೇ ಹಣ ನೀಡಿದರೂ ಅದನ್ನು ಫಲಾನುಭವಿಗಳಿಗೆ ತಲುಪಿಸಲು ನಿಮಗೇಕೆ ಇಷ್ಟು ಹೊಟ್ಟೆ ಕಿಚ್ಚು? ನಮ್ಮ ಸರ್ಕಾರದ ಯೋಜನೆಗೆಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಎಲ್ಲವೂ ಅರ್ಹಫಲಾನುಭವಿಗಳ ಖಾತೆಗೇ ನೇರವಾಗಿ ಜಮಾವಣೆಯಾಗುತ್ತದೆ. ಕಾಂಗ್ರೆಸ್ ಹಾಗೂ ಮಹಾಘಟಬಂಧನದಲ್ಲಿರುವವರ ಚಿಂತೆಯೂ ಇದೆ ಆಗಿದೆ. ಎಲ್ಲವೂ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳನ್ನು ತಲುಪಿದರೆ 5 ರೂಪಾಯಿಯನ್ನೂ ಎಗರಿಸಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ ಎಂಬುದೇ ಇವರ ಚಿಂತೆಯಾಗಿದೆ.

ಕರ್ನಾಟಕದ ರೈತ ವಿರೋಧಿಗಳು ಸಮ್ಮಿಶ್ರ ಸರ್ಕಾರದ ರೂಪದಲ್ಲಿ ಕುಳಿತಿದ್ದಾರೆ. ಅಧಿಕಾರದ ದಾಹ ಇರುವ ಕಾಂಗ್ರೆಸ್ ಹಾಗೂ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಿಂದಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸಾಲ ಮನ್ನ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ. ಜನತೆ ಕಣ್ಣಿಗೆ ಮಣ್ಣೆರಚಿದ್ದಾರೆ. ಅವರು ಬೇರೆಯವರು ಅಭಿವೃದ್ಧಿ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಸಣ್ಣ ತಪ್ಪಿನಿಂದಾಗಿ ಅಭಿವೃದ್ಧಿ ಸ್ಥಗಿತಗೊಂಡಿದೆ. ದೇಶಕ್ಕೂ ಇದೇ ಸ್ಥಿತಿ ಬರಬೇಕಾ?

ನಮ್ಮ ಸರ್ಕಾರದ ಪಾರದರ್ಶಕತೆಯಿಂದ ಭ್ರಷ್ಟಾಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದೇ ವಿಪಕ್ಷಗಳ ಆಕ್ರೋಶಕ್ಕೆ ಕಾರಣ. ಕಳ್ಳರ ಅಂಗಡಿ ಬಂದ್ ಆಗಿದೆ. ಅವರು ನನ್ನನ್ನು ವಿರೋಧಿಸಲು ಇರುವುದೂ ಇದೇ ಕಾರಣಕ್ಕೆ, ನನಗೆ ದೇಶದ ಜನತೆಯ ಬೆಂಬಲವಿದೆ. ನಾನು ಯಾರಿಗೂ ಹೆದರಬೇಕಿಲ್ಲ, ಇದೆಲ್ಲವೂ ನನ್ನ ಸಾಮರ್ಥ್ಯ ಅಲ್ಲ ದೇಶದ ಜನತೆಯ ಸಾಮರ್ಥ್ಯ.

Leave a Reply