ಮಂಡ್ಯದಲ್ಲಿ ಸುಮಲತಾಗೆ ಸಿಗಲಿದೆ ಗಜಬಲ!

ಡಿಜಿಟಲ್ ಕನ್ನಡ ಟೀಮ್:

ದೋಸ್ತಿಗಳಿಂದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಈಗ ಗಜ ಬಲ ಸಿಕ್ಕಿದೆ.

ಮಂಡ್ಯ ಜನರ ಪಾಲಿನ ಡಿ ಬಾಸ್ ದರ್ಶನ್ ತೂಗುದೀಪ್ ಈ ಬಾರಿಯ ಲೋಕಸಭೆ ಚುನಾವಣೆ ವೇಳೆ ಸುಮಲತಾ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಸುಮಲತಾ ಈಗಾಗಲೇ ಮಂಡ್ಯದಲ್ಲಿ ತಮ್ಮ ಕಾರ್ಯಕರ್ತರ ಜತೆ ಪ್ರಚಾರಕ್ಕೆ ಮುಂದಾಗಿದ್ದು, ಈಗ ದರ್ಶನ್ ಅವರ ಸಾಥ್ ನಿಂದ ಬಲ ಹೆಚ್ಚಿದೆ.

ಈಗಾಗಲೇ ಸುಮಲತಾ ಅವರಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹಲವು ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಸುಮಲತಾ ಅವರು ತಮ್ಮ ಪಾಡಿಗೆ ತಮ್ಮ ತಯಾರಿಯಲ್ಲಿ ತೊಡಗಿದ್ದು, ದೋಸ್ತಿಗಳ ನಡುವೆ ಸೀಟು ಹಂಚಿಕೆ ಫೈನಲ್ ಆದ ನಂತರ ತಮ್ಮ ಸ್ಪರ್ಧೆ ಸ್ವರೂಪವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಸುಮಲತಾ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದಾಗಲೇ ಎಲ್ಲರ ದೃಷ್ಟಿ ಸ್ಯಾಂಡಲ್​ವುಡ್​ ಮೇಲೆ ನೆಟ್ಟಿತ್ತು. ಅಂಬರೀಷ್​​ ಕನ್ನಡ ಚಿತ್ರರಂಗದಿಂದ ರಾಜಕೀಯಕ್ಕೆ ಕಾಲಿಟ್ಟವರು. ಅವರು ಅಜಾತ ಶತ್ರುವಿನಂತಿದ್ದರು. ದರ್ಶನ್​, ಯಶ್​, ಸುದೀಪ್​ ಸೇರಿ ಕನ್ನಡ ಚಿತ್ರರಂಗದ ಖ್ಯಾತ ನಟರು ಅಂಬರೀಷ್​ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಹಾಗಾಗಿ, ಸುಮಲತಾ ಚುನಾವಣೆಗೆ ನಿಲ್ಲುತ್ತಾರೆ ಎಂದಾಗ ಚಿತ್ರರಂಗ ಅವರ ಬೆನ್ನಿಗೆ ನಿಲ್ಲಲಿದೆ ಎಂದು ರಾಜಕೀಯ ತಜ್ಞರ ಭವಿಷ್ಯ ನುಡಿದಿದ್ದರು.

ಅದರ ಮೊದಲ ಭಾಗವಾಗಿ ದರ್ಶನ್ ಅವರು ಸುಮಲತಾ ಅವರ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ. ಈ ಬಗ್ಗೆ ಮಾತನಾಡಿರುವ ದರ್ಶನ್ ಹೇಳಿದ್ದಿಷ್ಟು…

‘ಅಪ್ಪಾಜಿಯವರು ಚುನಾವಣೆಗೆ ನಿಂತಾಗ ನಾನು ಅವರ ಬೆಂಬಲಕ್ಕೆ ನಿಂತಿದ್ದೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಈಗ ಸುಮಲತಾ ಪರ ಪ್ರಚಾರ ನಡೆಸುವುದು ನನ್ನ ಕರ್ತವ್ಯ. ನನ್ನ ಆಪ್ತರು ಎನಿಸಿದವರಿಗೆ ಪ್ರಚಾರ ಮಾಡಿಕೊಟ್ಟಿದ್ದೇನೆ. ಅದೇ ರೀತಿ ಸುಮಲತಾ ಅವರು ಕರೆದರೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ.’

Leave a Reply