ಖರ್ಗೆ- ಜಾಧವ್ ಬಗ್ಗೆ ಮೌನ! ಬಿಎಸ್ ವೈ ವಿರುದ್ಧ ಮೋದಿ ಮುನಿಸು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಆಗಮಿಸ್ತಿದ್ದಾರೆ ಅಂದ್ರೆ ಸಾಕಷ್ಟು ಚರ್ಚೆಗಳು ಶುರುವಾಗುತ್ತವೆ. ಮೋದಿ ಯಾರೆಲ್ಲರ ಬಗ್ಗೆ ಟೀಕೆ ಮಾಡ್ತಾರೆ, ಯಾರನ್ನೆಲ್ಲಾ ಟಾರ್ಗೆಟ್​ ಮಾಡ್ತಾರೆ ಅನ್ನೋ ಬಗ್ಗೆಯೂ ಮಾತುಕತೆಗಳು ಶುರುವಾಗ್ತವೆ. ತಮ್ಮ ಆವಭಾವಗಳಿಂದಲೇ ಜನರನ್ನು ಮೋದಿ ಮಾಡುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಮಾತ್ರ ಈ ಬಾರಿ ಮೌನಕ್ಕೆ ಶರಣಾಗಿದ್ದಾರೆ. ಮೊನ್ನೆ ಹುಬ್ಬಳ್ಳಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅಬ್ಬರಿಸಿರಲಿಲ್ಲ. ಇನ್ನು ಇವತ್ತು, ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಬೃಹತ್​ ಸಮಾವೇಶದಲ್ಲಿ ಮಾತನಾಡಿದ್ರು. ಮಲ್ಲಿಕಾರ್ಜುನ ಖರ್ಗೆಗೆ ಖೆಡ್ಡ ಎಂದು ಮಾಧ್ಯಮಗಳು ಅಬ್ಬರಿಸಿ ಬೊಬ್ಬಿರಿದಿದ್ವು. ಆದ್ರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಯಾವುದನ್ನೂ ಪ್ರಸ್ತಾಪ ಮಾಡದೆ ಕೇವಲ ಸರ್ಕಾರದ ವಿರುದ್ಧ ಅಷ್ಟೇ ವಾಗ್ದಾಳಿಗೆ ಸೀಮಿತ ಆದ್ರು.

ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ಅವರನ್ನು ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸುವ ಉದ್ದೇಶಕ್ಕಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಆದ್ರೆ ಉಮೇಶ್​ ಜಾಧವ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪಕ್ಷಕ್ಕೆ ಸ್ವಾಗತ ಕೋರಲೇ ಇಲ್ಲ. ಮೋದಿ ಕಾರ್ಯಕ್ರಮಕ್ಕೂ ಮೊದಲೇ ಉಮೇಶ್​ ಜಾಧವ್​ರನ್ನು ಬಿ.ಎಸ್​ ಯಡಿಯೂರಪ್ಪ, ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಹಾಗಾಗಿ ವೇದಿಕೆ ಮೇಲೆ ಉಮೇಶ್​ ಜಾಧವ್​ ಸಾಮಾನ್ಯ ನಾಯಕರಂತೆ ಕುಳಿತಿದ್ದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ಉಮೇಶ್​ ಜಾಧವ್​ ಅಸ್ತ್ರ ಬಿಡಲಾಗ್ತಿದೆ ಎಂದಿದ್ದ ರಾಜ್ಯ ಬಿಜೆಪಿಗೆ ಮೋದಿ ಶಾಕ್​ ಕೊಟ್ಟರು.

ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಒಂದೇ ಒಂದು ಹೇಳಿಕೆ ನೀಡಲಿಲ್ಲ. ಉಮೇಶ್​ ಜಾಧವ್​ ಸೆರ್ಪಡೆ ಬಗ್ಗೆಯೂ ಸೊಲ್ಲೆತ್ತಲಿಲ್ಲ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಚುನಾವಣಾ ಸಮಾವೇಶ ನಡೆದಾಗ ಅಪರೇಷನ್​ ಕಮಲ ಮಾಡಲು ಹೋಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ, ಜೆಡಿಎಸ್​ ಶಾಸಕ ನಾಗನಗೌಡ ಕಂಕನೂರ ಅವರ ಮಗ ಶರಣಗೌಡ ಅವರನ್ನು ಕರೆದು ಆಮಿಷ ಒಡ್ಡಿದ್ದ ಆಡಿಯೋ ರಿಲೀಸ್​ ಆಗಿತ್ತು. ಅದರ ಬೆನ್ನಲ್ಲೆ ಸಮಾವೇಶಕ್ಕೆ ಬಂದ ಮೋದಿ ಕೋಪದಿಂದ ಕುದಿಯುತ್ತಿದ್ರು. ಬಿ.ಎಸ್​ ಯಡಿಯೂರಪ್ಪ ಕೈ ಮುಗಿದರೂ ಪ್ರಧಾನಿ ಮೋದಿ ಅವರ ಕಡೆ ತಿರುಗಿಯೂ ನೋಡಲಿಲ್ಲ. ಇದೀಗ ಎರಡನೇ ಚುನಾವಣಾ ಸಮಾವೇಶಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಬಿಎಸ್​ ಯಡಿಯೂರಪ್ಪ ಕಡೆಗೆ ನೋಡಲಿಲ್ಲ. ಇದಕ್ಕೆ ಕಾರಣವಾಗಿದ್ದು, ಸೈನಿಕರು ಹುತಾತ್ಮರಾದ ಬಳಿಕ ಮೋದಿ ಸರ್ಕಾರದ ಪರ ಅಲೆ ಎದ್ದಿದ್ದು, 44 ಸೈನಿಕರ ಸಾವಿನ ಬಳಿಕ ರಾಜ್ಯದಲ್ಲಿ 22 ಸ್ಥಾನಗಳನ್ನು ಗಳಿಸುತ್ತೇವೆ ಎಂದಿದ್ದರು. ಈ ಸುದ್ದಿ ದೊಡ್ಡ ವಿವಾದವನ್ನೇ ಸೃಷ್ಠಿಸಿತ್ತು. ಹೀಗಾಗಿ ಇಂದೂ ಕೂಡ ನರೇಂದ್ರ ಮೋದಿ ಬಿ.ಎಸ್​ ಯಡಿಯೂರಪ್ಪ ಜೊತೆ ನೇರವಾಗಿ ಕ್ಷಣಕಾಲವೂ ಮಾತನಾಡಲಿಲ್ಲ ಎನ್ನಲಾಗ್ತಿದೆ.

ಒಟ್ಟಾರೆ, ಮೋದಿ ಆಕಾಂಕ್ಷೆಗೆ ಬಿಎಸ್​ವೈ ಅವರೇ ಮುಳ್ಳಾಗಿದ್ದು, ವಿವಾದದ ಮೇಲೆ ವಿವಾದ ಸೃಷ್ಠಿಸುತ್ತಿರೋದು ನುಂಗಲಾರದ ತುತ್ತಾಗಿದೆ.

Leave a Reply