ಇಂದು ಅಯೋಧ್ಯೆ ಸಂಧಾನ ಸಮಿತಿ ಮೊದಲ ಸಭೆ

ಡಿಜಿಟಲ್ ಕನ್ನಡ ಟೀಮ್:

ವಿವಾದಿತ ಅಯೋಧ್ಯೆ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿ ಇಂದು ಮೊದಲ ಬಾರಿಗೆ ಸಭೆ ಸೇರುತ್ತಿದೆ. ಹೀಗಾಗಿ ಈ ಸಭೆ ಮೇಲೆ ಸಾಕಷ್ಟು ಕುತೂಹಲ ಮೂಡಿದೆ.

ವಿವಾದಿತ ಭೂಮಿ ಇರುವ ಉತ್ತರ ಪ್ರದೇಶದ ಫೈಜಾಬಾದ್ ನ ಅಯೋಧ್ಯೆಯಲ್ಲೇ ಸುಪ್ರೀಂ ಕೋರ್ಟ್ ಸೂಚನೆಯಂತೆ ನಿವೃತ್ತ ನ್ಯಾಯಮೂರ್ತಿ ಖುಲೀಫುಲ್ಲಾ ನೇತೃತ್ವದಲ್ಲಿ ಈ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಖಲೀಫುಲ್ಲಾ ಅವರ ಜೊತೆಗೆ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರು ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಕಳೆದ ವಾರವಷ್ಟೇ ಅಯೋಧ್ಯ ಭೂ ವಿವಾದ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಂಧಾನದ ಮೂಲಕವೇ ವಿವಾದ ಬಗೆಹರಿಯಬೇಕು ಎಂದು ಹೇಳಿತ್ತು. ಹೀಗಾಗಿ ಇದಕ್ಕೆ ಸಂಧಾನ ಸಮಿತಿ ನೇಮಕ ಮಾಡಿ, ಸಂಧಾನ ಪ್ರಕ್ರಿಯೆಯಲ್ಲಿ ಷರತ್ತುಗಳನ್ನೂ ಕೂಡ ವಿಧಿಸಿತ್ತು.

ಯಾವುದೇ ಕಾರಣಕ್ಕೂ ಸಂಧಾನ ಪ್ರಕ್ರಿಯೆಯನ್ನು ಮಾಧ್ಯಮಗಳು ವರದಿ ಮಾಡಬಾರದು ಹಾಗೂ ಈ ಸಂಬಂಧ ಸಂಧಾನಕಾರರು ಮಾಹಿತಿ ಸೋರಿಕೆಯಾಗದಂತೆ ಎಚ್ಚರದಿಂದರಿಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು ಷರತ್ತು ಹಾಕಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿನ ಚರ್ಚೆ ಕುರಿತ ಮಾಹಿತಿ ಗೌಪ್ಯವಾಗಿ ಉಳಿಯಲಿದೆ.

ಸಂಧಾನ ಸಮಿತಿಗೆ ಸಂಧಾನಕ್ಕಾಗಿ ಪೀಠ 8 ವಾರಗಳ ಕಾಲಾವಕಾಶ ಹೊಂದಿದ್ದು, ಸಮಿತಿ ರಚನೆಯಾದ 4 ವಾರಗಳೊಳಗೆ ಕೋರ್ಟ್ ಸಂಧಾನ ಪ್ರಕ್ರಿಯೆಯ ಪ್ರಗತಿ ವರದಿ ಸಲ್ಲಿಕೆ ಮಾಡಬೇಕಿದೆ. ಸಂಧಾನ ಸಂಪೂರ್ಣ ಪ್ರಕ್ರಿಯೆ ಕ್ಯಾಮೆರಾದಲ್ಲಿ ದಾಖಲಿಸಲಾಗುತ್ತದೆ

Leave a Reply