ಮೋದಿ ತವರಲ್ಲಿ ‘ಕೈ’ ಬಲ ಪ್ರದರ್ಶನ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆ ಚುರುಕುಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್​ನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದು, ಅದರೊಂದಿಗೆ ಲೋಕ ಸಮರಕ್ಕೆ ರಣಕಹಳೆ ಊದಿದ್ದಾರೆ.

58 ವರ್ಷಗಳ ನಂತರ ಗುಜರಾತ್​ನಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ. 1930 ಮಾರ್ಚ್​ 12ರಂದು ದಂಡಿಯಲ್ಲಿ ಮಹಾತ್ಮ ಗಾಂಧಿ ಅವರು ಉಪ್ಪಿನ ಸತ್ಯಾಗ್ರಹ ಆರಂಭಿಸಿದ ಈ ದಿನದ ವಾರ್ಷಿಕೋತ್ಸವ ಸ್ಮರಣಾರ್ಥ ಇಂದು ಕಾಂಗ್ರೆಸ್​ ಈ ಸಭೆ ಆಯೋಜಿಸಿದೆ ಎಂದು ಗುಜರಾತ್​ ಕಾಂಗ್ರೆಸ್​ ಉಸ್ತುವಾರಿ ರಾಜೀವ್ ಸಾತ್ವ ವರದಿಗಾರರಿಗೆ ತಿಳಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಪಕ್ಷದ ಉನ್ನತ ಮಟ್ಟದ ಸಭೆ ನಡೆಸಿದರೆ, ಇತ್ತ ಅಹಮದಾಬಾದ್ ನಲ್ಲಿ ಕಾಂಗ್ರೆಸ್​ ಜನ ಸಂಕಲ್ಪ ಸಮಾವೇಶ, ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸಬರಮತಿಯ ಗಾಂಧಿ ಆಶ್ರಮದಲ್ಲಿ ನಾಯಕರ ಸಭೆ ನಡೆಸಿ ಬಿಜೆಪಿಗೆ ಸವಾಲೆಸೆಯುವ ಪ್ರಯತ್ನಕ್ಕೆ ಕೈ ಹಾಕಿದೆ.

ಸಬರಮತಿಯ ಗಾಂಧಿ ಆಶ್ರಮದಲ್ಲಿ ಪ್ರಾರ್ಥನಾ ಸಭೆಯೊಂದಿಗೆ ದಿನವನ್ನು ಆರಂಭಿಸಿದ ಕಾಂಗ್ರೆಸ್​ ನಾಯಕರು ನಂತರ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಮಧ್ಯಾಹ್ನ ಗಾಂಧಿನಗರದಲ್ಲಿ ಜೈ ಜವಾನ್ ಜೈ ಕಿಸಾನ್​ ಹೆಸರಿನಲ್ಲಿ ಜನ ಸಂಕಲ್ಪ ಸಮಾವೇಶ ನಡೆಯಲಿದೆ.

ಇದೇ ವೇಳೆ ಗುಜರಾತ್ ಪಾಟೀದಾರ್ ಸಮುದಾಯ ಯುವ ನಾಯಕ ಹಾರ್ದಿಕ್​ ಪಟೇಲ್​ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ.

Leave a Reply