ಬೀಸೋ ದೊಣ್ಣೆಯಿಂದ ಅತೃಪ್ತರು ಬಚಾವ್! ಕಾರಣವೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರ್ಕಾರದ ವಿರುದ್ಧ ನಾಲ್ವರು ಕಾಂಗ್ರೆಸ್ ಶಾಸಕರು ಆಕ್ರೋಶಗೊಂಡು ಭಿನ್ನಮತೀಯ ಚಟುವಟಿಕೆ ನಡೆಸಿದ್ರು. ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ ಅವರು ಈ ನಾಲ್ವರ ವಿರುದ್ಧ ಸ್ಪೀಕರ್ ಗೆ ದೂರು ನೀಡಿದರೂ ಆ ಬಳಿಕ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ವಿಪ್ ಉಲ್ಲಂಘನೆ ಆಗದಂತೆ ಅತೃಪ್ತರು ಸದನಕ್ಕೂ ಹಾಜರಾಗಿ ಸರ್ಕಾರದ ಪರವಾಗಿ ಕುಳಿತಿದ್ರು. ನಂತರ ನಡೆದ ಬೆಳವಣಿಗೆಯಲ್ಲಿ ಕಲಬುರಗಿ ಜಿಲ್ಲೆ ಚಿಂಚೋಳಿ ಶಾಸಕ ಉಮೇಶ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆ ಆಗಿದ್ರು. ರಾಜೀನಾಮೆ ಅಂಗೀಕಾರಕ್ಕೂ ಮೊದಲು ಸಿದ್ದರಾಮಯ್ಯ ಅವರು ಕೊಟ್ಟಿರುವ ಶಾಸರ ಅನರ್ಹತೆ ಶಿಫಾರಸು ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ವಿಚಾರಣೆ ನಿಗದಿ ಮಾಡಿದ್ದರು. ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚನೆ ಕೊಟ್ಟಿದ್ದರು. ಇದೀಗ ವಿಚಾರಣೆಯನ್ನು ಮುಂದೂಡಿದ್ದಾರೆ. ಮುಂದಿನ ದಿನಾಂಕವನ್ನೂ ಹೇಳಿಲ್ಲ. ಈ ವಿಚಾರಣೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಿಂದ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಸ್ಪೀಕರ್ ರಮೇಶ್ ಕುಮಾರ್ ಅವರು ವಿಚಾರಣೆ ನಡೆಸಲು ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದರು. ನಾನು ಅನರ್ಹತೆ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಒಂದು ಮೈಲುಗಲ್ಲಾಗಬೇಕು. ಬೇರೆ ಪ್ರಕರಣಗಳಿಗೆ ಇದು ಮಾದರಿ ಆಗಬೇಕು. ಆ ರೀತಿ ನಿರ್ಧಾರ ಕೈಗೊಳ್ತೇನೆ ಎಂದಿದ್ರು. ಇದೀಗ ದಿಢೀರ್ ಎಂದು ವಿಚಾರಣೆ ರದ್ದು ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ‌ ಶಾಸಕ ನಾಗೇಂದ್ರ, ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ಕೊಡಲಾಗಿತ್ತು. ಆದ್ರೆ ಕಾರಣವನ್ನೇ ನೀಡದೆ ವಿಚಾರಣೆ ದಿಢೀರ್ ಮುಂದೂಡಿದ್ದಾರೆ. ಇದಕ್ಕೆ ಎರಡು ಕಾರಣಗಳಿವೆ ಎನ್ನಲಾಗ್ತಿದೆ..

ಒಂದು ವೇಳೆ ಅತೃಪ್ತ ಶಾಸಕರನ್ನು ವಿಚಾರಣೆ ನಡೆಸಿ ನಾಲ್ವರನ್ನು ಅನರ್ಹ ಮಾಡಿದರೆ, ಚಿಂಚೋಳಿ ಶಾಸಕರ ಜೊತೆಯಲ್ಲಿ ಉಳಿದ ಮೂವರನ್ನು ಅನರ್ಹ ಮಾಡಿ ಆದೇಶ ಹೊರಡಿಸಿದರೆ ಲೋಕಸಭೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಭಿನ್ನಮತ ಬಿಸಿ ತಟ್ಟಲಿದೆ. ಒಂದು ವೇಳೆ ಬಳ್ಳಾರಿ ಹಾಗೂ ಬೆಳಗಾವಿಯ ಶಾಸಕರೂ ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗ ತೊಂದರೆ ಆಗಲಿದೆ. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯನ್ನೇ ಬೆಳಗಾವಿ ಅಭ್ಯರ್ಥಿ ಮಾಡಬೇಕು ಅನ್ನೋ ಚರ್ಚೆಗಳೂ ಶುರುವಾಗಿದ್ದು, ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಈ ರೀತಿಯ ಕಠಿಣ ನಿರ್ಧಾರ ಬೇಡ ಎನ್ನುವ ಸಂದೇಶ ಹೋಗಿರಬಹುದು ಎನ್ನುತ್ತಾರೆ ಕಾನೂನು ತಜ್ಞರು.

ಇನ್ನೊಂದು ಕಾರಣ ಅಂದ್ರೆ ರಮೇಶ್ ಜಾರಕಿಹೊಳಿ ಸಿಎಂ ಕುಮಾರಸ್ವಾಮಿ ಸ್ನೇಹ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಸಿಎಂ ಕುಮಾರಸ್ವಾಮಿ ಅವರಿಗೆ ಆಪ್ತರು. ಕಳೆದ ವಾರ ಸಿಎಂ ಕುಮಾರಸ್ವಾಮಿ ಸ್ವತಃ, ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ರು. ಕೆಲವು ಸಮಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ರು. ಈ ವೇಳೆ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ನಾಗೇಂದ್ರ ಕೂಡ ಹಾಜರಿದ್ರು. ಇಲ್ಲಿ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದ್ದು, ಸಿಎಂ ಸೂಚನೆಯ ಮೇರೆಗೆ ಅನರ್ಹತೆ ಕತ್ತಿಯಿಂದ ಅತೃಪ್ತ ಶಾಸಕರು ಪಾರಾಗಿದ್ದಾರಾ ಅನ್ನೋ ಅನುಮಾನವೂ ಶುರುವಾಗಿದೆ.

Leave a Reply