ಸೀಟು ಹಂಚಿಕೆ ಫೈನಲ್ ಮಾಡಿಕೊಳ್ಳಲು ದೋಸ್ತಿಗಳಿಗೆ ಇಂದೇ ಕೊನೆ ದಿನ!?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ ಹಾಗೂ ಜೆಡಿಎಸ್​ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ಮಣಿಸಲು ಸಜ್ಜಾಗಿವೆ. ಆದ್ರೆ ಸ್ಥಾನಗಳ ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಇನ್ನೂ ಕೂಡ ಹಗ್ಗಾಜಗ್ಗಾಟ ಮುಂದುವರಿದಿದೆ. ಮಾರ್ಚ್​ 16ರ ಸಮನ್ವಯ ಸಮಿತಿ ಸಭೆ ವೇಳೆಗೆ ಅಂತಿಮ ನಿರ್ಧಾರಕ್ಕೆ ಬರ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ರು. ಆದ್ರೆ ಮಾರ್ಚ್​ 16ರ ತನಕ ಕಾಂಗ್ರೆಸ್​-ಜೆಡಿಎಸ್​ ಕಾಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿವೆ ಮೂಲಗಳು. ಇಂದು ರಾತ್ರಿ ಎಷ್ಟು ಹೊತ್ತಾದರೂ ಕಾಂಗ್ರೆಸ್​-ಜೆಡಿಎಸ್​ ನಾಯಕರು ಒಂದು ನಿರ್ಧಾರಕ್ಕೆ ಬರಲೇ ಬೇಕಿದ್ದು, ಒಟ್ಟು 30 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸ್ಪರ್ಧೆ ಮಾಡುವ ಕ್ಷೇತ್ರಗಳು ಹಾಗೂ ಜೆಡಿಎಸ್​ ಸ್ಪರ್ಧೆ ಮಾಡುವ ಕ್ಷೇತ್ರಗಳು ಯಾವುವು ಅನ್ನೋದನ್ನು ನಿರ್ಧಾರ ಮಾಡಲೇ ಬೇಕಿದೆ.

ಕಾಂಗ್ರೆಸ್​ ಚುನಾವಣಾ ಸಮಿತಿ ಸಭೆ ನಡೆಯುವಷ್ಟರೊಳಗಾಗಿ ಯಾವ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಅನ್ನೋದು ಕನ್ಫರ್ಮ್​ ಆಗಬೇಕಿದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಅನ್ನೋದು ಗೊತ್ತಾದ ಬಳಿಕ ಆಕಾಂಕ್ಷಿಗಳ ಪಟ್ಟಿ ಚುನಾವಣಾ ಸಮಿತಿ ಮುಂದೆ ಹೋಗಲಿದೆ. ಆಕಾಂಕ್ಷಿಗಳ ಪಟ್ಟಿ ಚುನಾವಣಾ ಸಮಿತಿ ಎದುರು ಹೋದ ಬಳಿಕ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ. ಹಾಗಾಗಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ಯಾವ ಯಾವ ಕ್ಷೇತ್ರಗಳಿಂದ ಸ್ಪರ್ಧೆ ಮಾಡ್ಬೇಕು ಅನ್ನೋದು ಅಂತಿಮವಾದರೆ ರಾಜ್ಯ ಕಾಂಗ್ರೆಸ್​ ಆಕಾಂಕ್ಷಿಗಳ ಪಟ್ಟಿಯನ್ನು ಚುನಾವಣಾ ಸಮಿತಿ ಎದುರು ಹೆಸರು ಕಳುಹಿಸಲು ಅನುಕೂಲ ಇಲ್ಲದಿದ್ದರೆ, ಕಾಂಗ್ರೆಸ್​ನಲ್ಲಿ ಕೆಲವೊಂದು ಗೊಂದಲಗಳಾಗಿ, ಬಂಡಾಯದ ಬಾವುಟ ಹಾರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಇಂದು ಮೈತ್ರಿ ಕಸರತ್ತು ಅಂತಿಮವಾಗಬೇಕಿದೆ.

ಜೆಡಿಎಸ್​ ಒಟ್ಟು 12 ಸ್ಥಾನಗಳನ್ನು ಕೇಳಿ ಇದೀಗ 10 ಸ್ಥಾನಗಳಿಗೆ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದ್ದು, ಕನಿಷ್ಠ ಪಕ್ಷ 8 ಸ್ಥಾನಗಳಾದರೂ ಸಿಕ್ಕೆ ಸಿಗುತ್ತವೆ ಅನ್ನೋದು ಜೆಡಿಎಸ್​ ಮೂಲಗಳ ಮಾಹಿತಿ. ಒಂದು ವೇಳೆ ಕಡಿಮೆ ಸ್ಥಾನಗಳು ಸಿಕ್ಕರೆ ಜೆಡಿಎಸ್​ ಬಿಟ್ಟುಕೊಡುವ ಸಾಧ್ಯತೆಯೂ ತೀರ ಕಡಿಮೆ ಎನ್ನಲಾಗಿದೆ. ತುಮಕೂರು ಅಥವಾ ಮೈಸೂರು ಎರಡರಲ್ಲಿ ಒಂದನ್ನು ಬಿಟ್ಟುಕೊಡಲೇ ಬೇಕು ಎಂದು ಜೆಡಿಎಸ್​ ಹಠ ಹಿಡಿದಿದ್ದು, ಒಂದು ವೇಳೆ ಕಾಂಗ್ರೆಸ್​ ಒಪ್ಪದೇ ಇದ್ದರೆ ಜೆಡಿಎಸ್​, ಕಾಂಗ್ರೆಸ್​ ಫ್ರೆಂಡ್ಲಿ ಫೈಟ್​ಗೂ ಸಿದ್ಧವಾಗಿವೆ ಅನ್ನೋ ಮಾಹಿತಿ ಇದ್ದು, ಕಾಂಗ್ರೆಸ್​ನ ದೂರದೃಷ್ಠಿ ಲೆಕ್ಕಾಚಾರಕ್ಕೆ ಸೋಲಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸುಸೂತ್ರವಾಗಿ ಮೈತ್ರಿ ಕುದುರಿಸಲು ನಾಯಕರು ಸಜ್ಜಾಗಿದ್ದಾರೆ.

Leave a Reply