ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಜಯ? ಮೋದಿಗೆ ಸಿಗುತ್ತಾ ಮತ್ತೊಂದು ಅಸ್ತ್ರ..!?

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮಾ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಭಾರೀ ಹಿನ್ನಡೆಯಾಗಿತ್ತು. ಆ ಬಳಿಕ ಪಾಕ್​ನ ಬಾಲಕೋಟ್​ನಲ್ಲಿ ಭಾರತೀಯ ವಾಯುಪಡೆ ನಡೆಸಿದ ಏರ್​ ಸ್ಟ್ರೈಕ್​ ಬಳಿಕ ಮತ್ತೆ ಮೋದಿಯ ಖ್ಯಾತಿ ಹೆಚ್ಚಳವಾಗಿದೆ ಅನ್ನೋ ಸಮೀಕ್ಷೆಗಳು ಪ್ರಕಟವಾಗಿದ್ದವು. ಬಳಿಕ ಸೇನಾ ಕಾರ್ಯಾಚರಣೆ ವಿಚಾರದಲ್ಲಿ, ದೇಶಪ್ರೇಮದ ಹೆಸರಲ್ಲಿ ಲೋಕಸಭಾ ಚುನಾವಣೆ ನಡೆಸಲು ಪ್ರಧಾನಿ ಮೋದಿ ಪ್ರಯತ್ನ ಮಾಡಿದ್ದಾರೆ ಅನ್ನೋ ಟೀಕೆಗಳೂ ಕೇಳಿಬಂದಿದ್ವು. ಇದೀಗ ಪ್ರಧಾನಿ ನರೇಂದ್ರ ಮೋದಿ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್​ಪಿಎಫ್​ ಯೋಧರ ಸಾವಿಗೆ ಮೂಲ ಕಾರಣ ಎಂದು ಆರೋಪಿಸಲಾಗಿರುವ ಮಾಸ್ಟರ್​ ಮೈಂಡ್​, ಜೈಷ್​ ಎ ಮಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತೀಕ ಉಗ್ರ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ.

ಪುಲ್ವಾಮಾ ದಾಳಿಯಲ್ಲಿ ಪ್ರಮುಖ ಆರೋಪಿ ಜೈಷ್​ ಎ ಮಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಎನ್ನುವುದು ಭಾರತದ ವಾದ. ಇದಕ್ಕೆ ಪೂರಕ ಸಾಕ್ಷಿಗಳನ್ನು ಪಾಕಿಸ್ತಾನಕ್ಕೆ ಒದಗಿಸಿತ್ತು. ಬಳಿಕ ಪಾಕ್​ ಉಗ್ರ ಸಂಘಟನೆಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಗೆ ದೂರು ನೀಡಿದ್ದ ಭಾರತ ಸರ್ಕಾರ, ಉಗ್ರ ಮಸೂದ್​ ಅಜರ್​ನಲ್ಲಿ ಜಾಗತೀಕ ಭಯೋತ್ಪಾದಕ ಎಂದು ಘೋಷಣೆ ಮಾಡುವಂತೆ ಒತ್ತಾಯ ಮಾಡಿತ್ತು. ಇದೀಗ ವಿಶ್ವಸಂಸ್ಥೆಯಲ್ಲಿ ಭದ್ರತಾ ಸಮಿತಿಯ ಸಭೆ ನಡೆಯಲಿದ್ದು, ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಲಿದೆ.

ಅಂತಾರಾಷ್ಟ್ರೀಯ ಶಾಂತಿಗೆ ಧಕ್ಕೆ ಉಂಟಾದ ವಾತಾವರಣದಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ನಡೆಸಲಿದೆ. ಈ ಸಮಿತಿಯಲ್ಲಿ ಒಟ್ಟು 15 ದೇಶಗಳು ಸದಸ್ಯ ರಾಷ್ಟ್ರಗಳಾಗಿದ್ದು, ಎಲ್ಲರಿಗೂ ಒಂದೊಂದು ವೋಟಿನ ಅಧಿಕಾರವಿರುತ್ತದೆ. ಸಭೆ ಬಳಿಕ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದರೆ, ಫಲಿತಾಂಶವನ್ನು ಮತಕ್ಕೆ ಹಾಕಲಾಗುತ್ತೆ. ಈ ಬಾರಿ ಚೀನಾ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋ ಬಗ್ಗೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಎದುರು ನೋಡ್ತಿದೆ.

ಒಂದು ವೇಳೆ ಭಾರತದ ವಾದಕ್ಕೆ ವಿಶ್ವದ ಪ್ರಮುಖ ದೇಶಗಳು ಮನ್ನಣೆ ಕೊಟ್ಟು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಒಪ್ಪಿಗೆ ಸೂಚಿಸಿದ್ರೆ, ಭಾರತಕ್ಕೆ ಮತ್ತೊಂದು ಭರ್ಜರಿ ಗೆಲುವು ಸಿಕ್ಕಂತಾಗುತ್ತದೆ. ಭಾರತ ಉಗ್ರರ ಧಮನ ಮಾಡಲು ಸದಾಸಿದ್ಧ ಎಂದು ಅಬ್ಬರಿಸುತ್ತಿರುವ ಮೋದಿ ಚುನಾವಣಾ ಅಸ್ತ್ರಕ್ಕೆ ಮತ್ತೊಂದು ಬಾಣ ಸೇರ್ಪಡೆ ಆದಂತೆ ಆಗಲಿದೆ. ಪ್ರಧಾನಿ ಮೋದಿ ವಿಶ್ವಮೆಚ್ಚಿದ ನಾಯಕ ಎಂದು ಈಗಾಗಲೇ ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಈ ಸಮಯದಲ್ಲಿ ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಣೆ ಆದರೆ ಬಿಜೆಪಿ ಮಾತಿಗೆ ಬ್ರಹ್ಮಾಸ್ತ್ರ ಸಿಕ್ಕಂತೆ. ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಕಚೇರಿಯಲ್ಲಿ ಇಂದು ಮಧ್ಯಾಹ್ನ 1.30ಕ್ಕೆ ಭದ್ರತಾ ಸಮಿತಿ ಸಭೆ ಸೇರಲಿದ್ದು, ಸಭೆ ಬಳಿಕ ನಿರ್ಣಯ ಹೊರಬೀಳುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯರಾತ್ರಿ 1.30ಕ್ಕೆ ಸಭೆ ಸೇರಲಿದ್ದಾರೆ.

Leave a Reply