ಉಗ್ರ ಮಸೂದ್ ಅಜರ್ ಬೆನ್ನಿಗೆ ನಿಂತ ಚೀನಾ!

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ವಿಶ್ವ ಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಜೈಷ್ ಎ ಮೊಹಮದ್ ಸಂಘಟನೆ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.

ಭಾರತದ ಪರವಾಗಿಮಸೂದ್ ಅಜರ್ ನನ್ನು ಉಗ್ರ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆ ಭದ್ರತಾ ಸಮಿತಿ ಮುಂದೆ ಇಟ್ಟಿತ್ತು. ಪುಲ್ವಾಮ ದಾಳಿಯ ನಂತರವಾದರೂ ಚೀನಾ ಪಾಕ್ ಉಗ್ರರ ಪರವಾಗಿ ನಿಲ್ಲುವುದನ್ನು ನಿಲ್ಲಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಚೀನಾ ಮಾತ್ರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡದೆ ಮಸೂದ್ ಅಜರ್ ವಿರುದ್ಧದ ಪ್ರಸ್ತಾಪವನ್ನು ತಡೆದಿದೆ.

ಚೀನಾ ನಡೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಚೀನಾ ಮತ್ತೆ ತಡೆಹಿಡಿದಿದೆ. ಚೀನಾ ನಡೆಯಿಂದಾಗಿ ನಿಜಕ್ಕೂ ನಿರಾಶೆಯಾಗಿದೆ. ನೂರಾರು ಮಂದಿಯ ಸಾವಿಗೆ ಕಾರಣವಾದ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಅಡ್ಡಿಯಾಗುವುದು ಸರಿಯಲ್ಲ. ವಿಶ್ವ ಸಮುದಾಯವೇ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಪರಿಗಣಿಸಿದೆ. ಇಂತಹ ಸಂದರ್ಭದಲ್ಲೂ ಚೀನಾ ಭಾರತದ ಪ್ರಯತ್ನಕ್ಕೆ ಅಡ್ಡಿಯಾಗುತ್ತಿದೆ. ಸ್ವತಃ ಜೈಶ್ ಇ ಉಗ್ರ ಸಂಘಟನೆಯೇ 44 ಮಂದಿ ಯೋಧರ ಸಾವಿಗೆ ಕಾರಣ ಎಂದು ಜವಾಬ್ದಾರಿ ಹೊತ್ತುಕೊಂಡಿದೆ. ಹೀಗಿರುವಾಗಿ ಆ ಸಂಘಟನೆಯ ಮುಖ್ಯಸ್ಥನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡಬೇಕು’ ಎಂದು ಭಾರತ ವಿದೇಶಾಂಗ ಇಲಾಖೆ ಅಗ್ರಹಿಸಿದೆ.

Leave a Reply