ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯ

ಡಿಜಿಟಲ್ ಕನ್ನಡ ಟೀಮ್:

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ.

ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾತೆ ಮಹಾದೇವಿ ಅವರು ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾಗಿದ್ದಾರೆ.

ತಜ್ಞ ವೈದ್ಯ ಸುದರ್ಶನ್​ ಬಲ್ಲಾಳ್​ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಅವರು ಹೇಳಿದ್ದಿಷ್ಟು… ‘ಮಾತೆ ಮಹಾದೇವಿ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಗೆ ತೆರಳಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ.’

ಕಿಡ್ನಿ ವೈಫಲ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾತೆ ಮಹಾದೇವಿ ಅವರು ಮಾ.9ರಂದು ಬೆಂಗಳೂರು ಎಚ್​ಎಎಲ್​ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

1946ರ ಮಾರ್ಚ್ 13ರಂದು. ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಅವರು ಜನಿಸಿದ ಇವರು, ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ಧೀಕ್ಷೆ ಪಡೆದಿದ್ದರು. ಉತ್ತಮ ವಾಗ್ಮಿ, ಸಾಹಿತಿಯಾಗಿ ಇವರು ಪ್ರಸಿದ್ಧರಾಗಿದ್ದರು.

ಪ್ರತಿ ವರ್ಷ ಶರಣ ಸಮ್ಮೇಳನ ಆಯೋಜನೆ ಮಾಡುತ್ತಿದ್ದ ಇವರು, ಕೂಡಲಸಂಗಮ, ಬಸವಕಲ್ಯಾಣದಲ್ಲಿ ಕಾರ್ಯಕ್ರಮ ಆಯೋಜಿಸಿ, ಶರಣ ಧರ್ಮ ಪ್ರಚಾರದಲ್ಲಿ ಸಕ್ರಿಯರಾಗಿದ್ದರು.

ಬಸವ ತತ್ವ ದರ್ಶನ ಬೃಹತ್ ಕೃತಿ ರಚಿಸಿದ ಖ್ಯಾತಿ ಮಾತೆ ಮಹಾದೇವಿ ಅವರಿಗೆ ಸೇರುತ್ತದೆ. ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ, ಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪನೆ, ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ, ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಇವರ ಸಾಧನೆ ಪಟ್ಟಿಯಲ್ಲಿ ಕಂಡುಬರುವ ಮುಖ್ಯ ಅಂಶಗಳು.

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಬರುತ್ತಿದ್ದಂತೆ ಹೋರಾಟದಲ್ಲಿ ಮುಂದಾಳತ್ವ ವಹಿಸಿದ ಮಾತೆ ಮಹಾದೇವಿಯವರು. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಮಹಾದೇವಿ ಹೇಳಿದ್ದರು.

Leave a Reply