ಲೋಕಸಭೆ ಚುನಾವಣೆ: ಯಶ್, ದರ್ಶನ್ ಗೆ ಧರ್ಮಸಂಕಟ!

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಧರ್ಮ ಸಂಕಟ ತಂದೊಡ್ಡಿದೆ.

ಹೌದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಎಲ್ಲರ ಗಮನ ಸೆಳೆದು ಕೇಂದ್ರಬಿಂದುವಾಗಿದೆ. ಕಾರಣ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ರಾಜಕೀಯ ಎಂಟ್ರಿಗೆ ಸುಮಲತಾ ಬಂಡಾಯ ಸ್ಪರ್ಧೆ ಅಡ್ಡವಾಗಿರೋದು.

ಕಾಂಗ್ರೆಸ್ ಟಿಕೆಟ್ ಸಿಗದಿದ್ದರೂ ಪಕ್ಷೇತರವಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಪರ ಅಂಭಿ ಅಭಿಮಾನಿಗಳ ಅನುಕಂಪದ ಅಲೆ ಹೆಚ್ಚಾಗಿದೆ. ಈ ಮಧ್ಯೆ ದರ್ಶನ್ ಹಾಗೂ ಯಶ್ ತಮ್ಮ ಸಿನಿಮಾ ವೃತ್ತಿ ಜೀವನದ ಗಾಡ್ ಫಾದರ್ ಅಂಬರೀಶ್ ಗಾಗಿ ಹಾಗೂ ಅಮ್ಮನ ಸ್ಥಾನದಲ್ಲಿರುವ ಸುಮಲತಾ ಅವರ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.

ಇದು ಸಹಜವಾಗಿಯೇ ಈ ಇಬ್ಬರು ನಟರನ್ನು ಆರಾಧಿಸುತ್ತಿರುವ ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ವೀಡಿಯೊ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಟರು ಜೆಡಿಎಸ್ ವಿರುದ್ಧ ಪ್ರಚಾರ ಮಾಡದಂತೆ ಮನವಿ ಮಾಡುತ್ತಿದ್ದಾರೆ.

ಇದು ಸಹಜವಾಗಿ ಯಶ್ ಹಾಗೂ ದರ್ಶನ್ ಅವರಲ್ಲಿ ಅಭಿಮಾನಿಗಳ ಮನವಿಗೆ ಸ್ಪಂದಿಸಬೇಕೇ ಅಥವಾ ಅಮ್ಮನ ಸ್ಥಾನದಲ್ಲಿರುವ ಸುಮಲತಾ ಅವರ ಬೆನ್ನಿಗೆ ನಿಲ್ಲಬೇಕೇ ಎಂಬುದು ಈ ಇಬ್ಬರು ಸ್ಟಾರ್ ನಟರನ್ನು ಕಾಡುತ್ತಿದೆ.

Leave a Reply