ಜೆಡಿಎಸ್ ಗೆ ಬೈ, ಬಿಎಸ್ಪಿಗೆ ಜೈ ಎಂದ ಡ್ಯಾನಿಶ್ ಅಲಿ! ಇದರ ಹಿಂದಿನ ಲೆಕ್ಕಾಚಾರ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್​ ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ 20 ವರ್ಷಗಳಿಂದ ದೇವೇಗೌಡರ ಆಪ್ತರಾಗಿದ್ದ ಡ್ಯಾನಿಶ್​ ಅಲಿ ದಿಢೀರ್ ಬೆಳೆವಣಿಗೆಯಲ್ಲಿ ಪಕ್ಷ ತೊರೆದು ಬಿಎಸ್ಪಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಗಳು ಬಂದಿವೆ.

ಅಲಿ ಅವರನ್ನು ಶನಿವಾರ ಬಿಎಸ್​ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್​ ಚಂದ್ರ ಮಿಶ್ರಾ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಅಲಿ ಉತ್ತರ ಪ್ರದೇಶದ ಹಾಪುರ್ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲೂ​​ ಅಲಿ ಪ್ರಮುಖ‌ ಪಾತ್ರ ವಹಿಸಿದ್ದರು. ಜೊತೆಗೆ ರಾಜ್ಯದಲ್ಲಿ ಬಿಎಸ್ ಪಿ-ಜೆಡಿಎಸ್ ಮೈತ್ರಿಯಾಗುವುದಕ್ಕೂ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಇತ್ತೀಚೆಗೆ ಅಂತಿಮವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಸೀಟು ಹಂಚಿಕೆ ವಿಚಾರದಲ್ಲೂ ಅಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಿಎಸ್ಪಿ ಸೇರ್ಪಡೆ ಬಗ್ಗೆ ಮಾಹಿತಿ ನೀಡಿರುವ ಅಲಿ ಟ್ವಿಟ್ ಮಾಡಿರುವುದು ಹೀಗೆ… ‘ಜೆಡಿಎಸ್​​ನಲ್ಲಿದ್ಧಾಗ ದೇವೇಗೌಡರಿಂದ ಏನೂ ಕೇಳಲಿಲ್ಲ. ದೆಹಲಿಯಲ್ಲಿ ಅವರು ಹೇಳಿದ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದೇನೆ. ಮುಂದೆ ಮಾಯಾವತಿ ಹೇಳಿದ ಕೆಲಸ ಮಾಡುತ್ತೇನೆ.’

ಕೆಲವು ಮೂಲಗಳ ಪ್ರಕಾರ ಅಲಿ ದಶಕಗಳಿಂದ ಜೆಡಿಎಸ್​ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರದಿಂದ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗಿದೆ.
​ಅಲಿ ಜೆಡಿಎಸ್​ ರಾಜ್ಯಸಭಾ ಸ್ಥಾನ ಕೇಳಿದ್ದರು. ಆದರೆ ಜೆಡಿಎಸ್​ನಿಂದ ರಾಜ್ಯಸಭೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಚುನಾವಣಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮತ್ತೆ ಕೆಲವು ಮೂಲಗಳ ಪ್ರಕಾರ ಅಲಿ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಹೀಗಾಗಿ ಜೆಡಿಎಸ್ ತೊರೆದಿದ್ದಾರೆ. ದೇವೇಗೌಡರ ಸಮ್ಮತಿ ಮೇರೆಗೆ ಅಲಿ ಮಾಯಾವತಿ ಪಕ್ಷ ಸೇರಿದ್ದಾರೆ. ಬಿಎಸ್​ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ದಾನಿಶ್​​ ಅಲಿ ಗೆಲುವು ಸಾಧಿಸಬಹುದು. ಅದರ ಜತೆಗೆ ಬಿಎಸ್​ಪಿ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.​​ ಆಮೂಲಕ ಕಾಂಗ್ರೆಸ್ ವಿರುದ್ಧ ಮಾಯಾವತಿ ಮುನಿಸಿಕೊಂಡಿದ್ದಾರೆ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಎಸ್ 1 ಸ್ಥಾನವನ್ನು ಬಿಎಸ್ಪಿಗೆ, ಉತ್ತರಪ್ರದೇಶದಲ್ಲಿ 1 ಸ್ಥಾನವನ್ನು ಜೆಡಿಎಸ್​​​ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿತ್ತು. ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಆದ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಟಿಕೆಟ್ ನೀಡಲು ಬಿಎಸ್ಪಿ ನಿರಾಕರಿಸಿತು. ಹೀಗಾಗಿ​ ದೇವೇಗೌಡರ ಸಲಹೆ ಮೇರೆಗೆ ಅಲಿ ಬಿಎಸ್ ಪಿ ಚಿಹ್ನೆಯಡಿ ಉತ್ತರಪ್ರದೇಶದಿಂದ ಸ್ಪರ್ಧಿಸಲಿದ್ದಾರೆ ಎಂಬ ಸಮರ್ಥನೆಯೂ ಕೇಳಿಬರುತ್ತಿದೆ.

Leave a Reply