ಕರಾವಳಿಯಲ್ಲಿ ಕಮಲಪಡೆ ಕಂಗಾಲು!

ಡಿಜಿಟಲ್ ಕನ್ನಡ ಟೀಮ್:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ಜಯಭೇರಿ ಬಾರಿಸಿತ್ತು. ಆದ್ರೀಗ ಎದುರಾಗಿರುವ ಲೊಕಸಭಾ ಚುನಾವಣೆ ಕಮಲಪಡೆಯನ್ನು ಕಂಗೆಡುವಂತೆ ಮಾಡಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎನ್ನುತ್ತಿರುವ ಜನರೇ ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿ ಅಭಿಯಾನ ನಡೆಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುತ್ತಾ ಅನ್ನೋ ವಿಚಾರ ಕಮಲ ನಾಯಕರ ಕಂಗಾಲಿಗೆ ಕಾರಣವಾಗಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಎದ್ದಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಅನ್ನೋ ಅಭಿಯಾನ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಶೋಭಾ ಗೆಲುವಿಗೆ ಸಹಕಾರಿ ಆಗಬೇಕಿದ್ದ ಶಾಸಕ ಸಿ.ಟಿ ರವಿ ಅವರ ಆಪ್ತ ನಾಯಕ ಶೋಭಾ ವಿರುದ್ದ ನೇರ ದಾಳಿ ನಡೆಸಿದ್ದು ಕಮಲ ಪಡೆಯ ನಿದ್ದೆಗೆಡಿಸಿದೆ. ಅಲ್ಲಿ ಜಯಪ್ರಕಾಶ್ ಹೆಗಡೆ ಅವರನ್ನು ಅಭ್ಯರ್ಥಿ ಮಾಡಬೇಕು ಅನ್ನೋದು ಸ್ಥಳೀಯರ ಒತ್ತಾಯ. ಹೈಕಮಾಂಡಗ ಮಾತ್ರ ಶೋಭಾಗೆ ಟಿಕೆಟ್ ಎನ್ನುತ್ತಿದೆ. ಯಡಿಯೂರಪ್ಪ ಕೂಡ ಹಾಲಿ‌ ಸಂಸದರಿಗೆ ಟಿಕೆಟ್ ಖಚಿತ ಎಂದಿದ್ದಾರೆ.

ಇನ್ನು ಕೇಂದ್ರ ಸರ್ಕಾರದಲ್ಲಿ ಸಚಿವರಾದ ಬಳಿಕ ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾಗಿರುವ ಅನಂತ್ ಕುಮಾರ್ ಹೆಗಡೆ ಬಗ್ಗೆ ಬಿಜೆಪಿ ನಾಯಕರಿಗೇ ವಿಶ್ವಾಸವಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾ, ಪಕ್ಷಕ್ಕೆ ಮುಜುಗರ ಮಾಡುತ್ತಾ ತಿರುಗುವ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಸಿಗೋದಿಲ್ಲ ಅನ್ನೋ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬಂದಿತ್ತು. ಆದ್ರೆ ಹಾಲಿ ಸಂಸದರಿಗೆಲ್ಲಾ ಟಿಕೆಟ್ ಎಂದು ಘೋಷಣೆ ಮಾಡಿರೋದ್ರಿಂದ ಸ್ಪರ್ಧೆ ಮಾಡೋದು ಪಕ್ಕಾ ಆಗಿದೆ. ಇಷ್ಟೆಲ್ಲದ ನಡುವೆ ಅನಂತ್ ಕುಮಾರ್ ಹೆಗಡೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಅನ್ನೋ ಆರೋಪ ಕ್ಷೇತ್ರದಲ್ಲಿದೆ. ಈ ಬಾರಿ ಅಭ್ಯರ್ಥಿ ಬದಲಾವಣೆ ಮಾಡುವ ನಿರೀಕ್ಷೆಯಲ್ಲಿದ್ದ ಬಿಜೆಪಿ‌ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಕ್ಷೇತ್ರದಲ್ಲೂ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿಕೊಂಡು ಗೆಲ್ಲಿಸಿಕೊಂಡು ಬಂದರೂ ಸಂಸದರೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನೂ ಮಾಡೋದಿಲ್ಲ ಎಂದು ಆರೋಪಿಸುತ್ತಾರೆ.

ಒಟ್ಟಾರೆ ಕರಾವಳಿ ಕರ್ನಾಟಕದ ಮೂವರು ಸಂಸದರ ವಿರುದ್ಧ ಸ್ವತಃ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿರೋ ವಿಚಾರ ಕಮಲ ನಾಯಕರ ನಿದ್ರೆಗಡಿಸಿದೆ. ಆದರೂ ಮತ್ತೊಮ್ಮೆ ಮೋದಿ ಅನ್ನೋ ಘೋಷವಾಕ್ಯ ಗೆಲುವಿಗೆ ಸಹಕಾರಿ ಎನ್ನಲಾಗ್ತಿದೆ. ಆದರೂ ಜನರ ಮನಸ್ಸಲ್ಲಿರುವ ವಿರೋಧ ಭಾವವನ್ನು ಹೋಗಲಾಡಿಸುವುದು ಹೇಗೆ ಅನ್ನೋ ಚಿಂತೆ ನಾಯಕರನ್ನು ಕಾಡುತ್ತಿದೆ ಅಂದ್ರೆ ಸುಳ್ಳಲ್ಲ.

Leave a Reply