ಕಲಬುರಗಿಯಲ್ಲಿ ‘ಕೈ’ ಬಲ ಪ್ರದರ್ಶನ, ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿಂದು ಭಾಗವಹಿಸಿದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ‘ಪ್ರಧಾನಿ ಇಡೀ ದೇಶದ ಜನರನ್ನು ಚೌಕಿದಾರರನ್ನಾಗಿ ಮಾಡಿದ್ದಾರೆ’ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲಬುರ್ಗಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ ರಾಹುಲ್, ಮೋದಿ ವಿರುದ್ಧ ಹರಿಹಾಯ್ದಿದ್ದು ಹೀಗೆ…

‘ಚೌಕಿದಾರ್ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಉದ್ಯಮಿಗಳ ಕಾವಲಿಗೆ ನಿಂತಿದ್ದಾರೆ. ಈ ಚೌಕಿದಾರ್ ನಿಂದಾಗಿ ನಿರುದ್ಯೋಗಿಗಳು, ಬಡವರು, ಸಣ್ಣ ಉದ್ಯಮಿಗಳು ಹಾಗೂ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಅನಿಲ್ ಅಂಬಾನಿ, ನೀರವ್ ಮೋದಿಯಂತಹ ಶ್ರೀಮಂತ ಉದ್ಯಮಿಗಳಿಗೆ ಲಾಭವಾಗಿದೆ.

ನಿರುದ್ಯೋಗ ನಿವಾರಣೆಯಲ್ಲಿ ಪ್ರಧಾನಿ ಸಂಪೂರ್ಣ ವಿಫಲರಾಗಿ ದ್ದಾರೆ. ಜಿಎಸ್‍ಟಿ ಮೂಲಕ ಗಬ್ಬರ್‍ಸಿಂಗ್ ಟ್ಯಾಕ್ಸ್ ಜಾರಿಗೆ ತಂದು ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದ್ದಾರೆ. ಕೇವಲ ಮಾತುಗಳಿಂದಲೇ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಆಡಳಿತ ತರಬೇಕು.

ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದಾಗಲೆಲ್ಲಾ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಮೋದಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಬ್ಯಾಂಕುಗಳ ಸಾಲ ಸೌಲಭ್ಯ ಯೋಜನೆ ಸಣ್ಣಪುಟ್ಟ, ಮಧ್ಯಮವರ್ಗದವರ ಬದಲಾಗಿ ಶ್ರೀಮಂತರ ಪಾಲಾಗಿದೆ. ನೋಟು ಅಮಾನೀಕರಣದಿಂದ ಆರ್ಥಿಕ ವ್ಯವಸ್ಥೆಯೇ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‍ನಿಂದ ಮಾತ್ರ ಎಲ್ಲಾ ವರ್ಗದ ಮತ್ತು ಸಮುದಾಯಗಳ ಜನರ ಹಿತರಕ್ಷಣೆ ಸಾಧ್ಯ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಮಧ್ಯಮ ವರ್ಗದವರಿಗೆ ಆದಾಯ ಖಾತ್ರಿ ಯೋಜನೆ ಜಾರಿಗೆ ತರಲಾಗುವುದು. ಉದ್ಯೋಗ ಸೃಷ್ಟಿಸಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಶೈಕ್ಷಣಿಕ ಸಂಸ್ಥೆಗಳನ್ನು ಬಲಪಡಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.’

ಈ ಸಮಾವೇಶದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಹಾಜರಿದ್ದರು.

Leave a Reply