ಮಂಡ್ಯದಲ್ಲಿ ವರ್ಕೌಟ್ ಆಗೋದು ಅಭಿಮಾನದ ತಂತ್ರವೋ ಅಭಿವೃದ್ಧಿ ಮಂತ್ರವೋ?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆ ಇಡೀ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ. ಸೋಮವಾರ ಅಂಬರೀಶ್ ಪತ್ನಿ ಸುಮಲತಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನಟ ದರ್ಶನ್ ಹಾಗೂ ಯಶ್ ಸೇರಿದಂತೆ ರಾಕ್‌ಲೈನ್ ವೆಂಕಟೇಶ್ ಜೊತೆ ಸುದ್ದಿಗೋಷ್ಠಿ ನಡೆಸಿದ ಸುಮಲತಾ, ಮಾರ್ಚ್ 20ರಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡ್ತೇನೆ ಎಂದಿದ್ದಾರೆ.

ಅಂಬರೀಶ್ ನಿಧನರಾದಾಗ ಮಂಡ್ಯ ಜನ ವಿಶ್ವಾಸ ತೋರಿಸಿದ್ರು. ಅಣ್ಣ ಇಲ್ಲ ಅಂತ ನೀವು ಏಕಾಂಗಿ ಅಲ್ಲ ಅಂದ್ರು. ಅಂಬರೀಶ್‌ರನ್ನ ಜನ ಪ್ರೀತಿ ಮಾಡ್ತಾರೆ ಅಂತ ಗೊತ್ತಿತ್ತು. ಆದ್ರೆ ನಾನು ಕತ್ತಲೆಯಲ್ಲಿ ಇದ್ದಾಗ ಜನರ ಕಾಳಜಿ ನನಗೆ ಧೈರ್ಯ ತಂದುಕೊಡ್ತು. ಅಂಬರೀಶ್ ಒಳ್ಳೆಯ‌ ಕೆಲಸ ಮಾಡಿದ್ದಾರೆ. ಅವರು ಬಿಟ್ಟು ಹೋದ ಕನಸನ್ನು ನೀವು ಪೂರ್ತಿ ಮಾಡಿ ಅಂತ ಮಂಡ್ಯದ ನೂರಾರು ಜನ ಹೇಳಿದ್ರು. ಹೀಗಾಗಿ ನಾನು ರಾಜಕಾರಣಕ್ಕೆ ಬಂದಿದ್ದೇನೆ. ನಾನು ಹಾಗೂ ಅಭಿ ಆರಾಮಾಗಿ ಮನೆಯಲ್ಲಿ ಇದ್ದು ಜೀವನ ಮಾಡುವಷ್ಟನ್ನು ಅಂಬರೀಶ್ ಮಾಡಿದ್ದಾರೆ.

ಅಂಬರೀಶ್ ಅವರನ್ನ ಪ್ರೀತಿಯಿಂದ ಆರಿಸಿ, ಕಳುಹಿಸಿದ ಜನರ ಪರ ನಾನು ನಿಲ್ಲಬೇಕು. ಜನರ ಮಾತು ಕೇಳದೆ ಹೋದ್ರೆ ಅಂಬರೀಶ್ ಪತ್ನಿ‌ ಅನ್ನಿಸಿಕೊಳ್ಳೋಕೆ ಸಾಧ್ಯವಿಲ್ಲ ಎನಿಸಿತು. ಈ ನಿರ್ಧಾರ ಕೆಲವರಿಗೆ ಬೇಸರ ತರಿಸಿರಬಹುದು. ಅಂಬರೀಶ್ ಮೇಲಿರುವ ಮಂಡ್ಯ ಜನರ ಪ್ರೀತಿ ಉಳಿಸಿಕೊಳ್ಳುವ ಪ್ರಯತ್ನ ನನ್ನದು. ಈ ನಿರ್ಧಾರದಿಂದ ಕೆಲವು ಸಂಬಂಧ, ಸ್ನೇಹ ದೂರ ಆಗಿದೆ. ಅದು ನನಗೆ ಮೊದಲೇ ಗೊತ್ತಿತ್ತು. ಅಂಬರೀಶ್ ಪ್ರೀತಿಸಿ, ಬೆಳೆಸಿದ ಜನಕ್ಕಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತಗೊಂಡಿದ್ದೀನಿ. ಮಂಡ್ಯದ ಜನ ಅಂಬರೀಶ್ ಮೇಲಿನ ಪ್ರೀತಿಯಿಂದ ನನ್ನನ್ನು ಗೆಲ್ಲಿಸ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ನನಗೆ ರೈತರ ಬಗ್ಗೆ ಕಾಳಜಿ ಇಲ್ಲ ಅಂತ ಕುಮಾರಸ್ವಾಮಿ ಟೀಕಿಸಿರಬಹುದು. ಆದರೆ ಮಂಡ್ಯದ ಜನತೆಗಾಗಿ ಕಾವೇರಿ ವಿಷಯ ಬಂದಾಗ ಕೇಂದ್ರದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅಂಬರೀಶ್ ಎಂದರು.

ಹೀಗೆ ಸುಮಲತಾ ಅಭಿಮಾನದ ಮೇಲೆ ಮತ ಕೇಳುತ್ತಿದ್ದರೆ, ಸಿಎಂ ಕುಮಾರಸ್ವಾಮಿ ಅಭಿವೃದ್ಧಿ ಮೇಲೆ ಮತ ಕೇಳುತ್ತಿದ್ದಾರೆ. ಈಗಾಗಲೇ ಮಂಡ್ಯಕ್ಕೆ 5 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದು, ಈಗಾಗಲೇ ಹಲವು ಸಾಕಷ್ಟು ಕೆಲಸಗಳಿಗೆ ಚಾಲನೆಯನ್ನೂ ನೀಡಿದ್ದು, ಮಂಡ್ಯ ಅಭಿವೃದ್ಧಿ ನನ್ನ ಗುರಿ ಎಂದು ಘೋಷಣೆ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಮಂಡ್ಯ ಜನರ ಋಣ ನನ್ನ ಮೇಲಿದೆ. ಆ ಋಣದ ಭಾರವನ್ನು ಕಡಿಮೆ ಮಾಡಿಕೊಳ್ಳಲು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ. ಇದೀಗ ಮಂಡ್ಯ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಿರೋದ್ರಿಂದ ಮಂಡ್ಯ ಜನ ಗೊಂದಲಕ್ಕೆ ಒಳಗಾಗಿದ್ದು ಅಭಿವೃದ್ಧಿ ಭರವಸೆ ಕೊಟ್ಟಿರೋ ಜೆಡಿಎಸ್ ಬೆಂಬಲಿಸಬೇಕೋ ಅಥವಾ ಅಭಿಮಾನದ ಮೇಲೆ ಮತ ಕೇಳ್ತಿರೋ ಸುಮಲತಾ ಬೆಂಬಲ ಮಾಡ್ಬೇಕೋ ಅನ್ನೋ ಇಕ್ಕಟ್ಟಿನಲ್ಲಿದ್ದಾರೆ. ಮತದಾರನ ಮನಸನ್ನು ಯಾವುದು ಗೆಲ್ಲುತ್ತದೆ ಎಂಬುದನ್ನು ತಿಳಿಯಲು ಇನ್ನೆರಡು ತಿಂಗಳು ಕಾಯಬೇಕು.

Leave a Reply