ಪಕ್ಷೇತರರಾಗಿ ಸುಮಲತಾ ಸ್ಪರ್ಧೆ ಖಚಿತ! ಬುಧವಾರ ನಾಮಪತ್ರ ಸಲ್ಲಿಕೆ

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಸೋಮವಾರ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸಿದ ಸುಮಲತಾ ಅಂಬರೀಷ್, ಮಾರ್ಚ್ 20 ರಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು,

‘ಅಂಬರೀಷ್ ತೀರಿಕೊಂಡಾಗ ಕತ್ತಲೆಯ ಮನಸ್ಥಿತಿಯಲ್ಲಿದೆ. ಜೀವನದಲ್ಲೇನಿದೆ ಎಂಬ ಭಾವನೆ ಕಾಡತೊಡಗಿತ್ತು. ಅಂತಹ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಂಬರೀಷ್ ಅಭಿಮಾನಿಗಳು ನನ್ನಲ್ಲಿ ಧೈರ್ಯ ತುಂಬಿದ್ದರು.ಅವರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕಾರಣ ಪ್ರಾರಂಭಿಸುತ್ತಿದ್ದೇನೆ.

ಚುನಾವಣೆ ಎದುರಿಸಲು ಸಾಕಷ್ಟು ಧೈರ್ಯ ಬೇಕು, ಈಗ ನಾನು ಆಯ್ಧುಕೊಳ್ಳುವ ದಾರಿ ಸುಲಭವಾಗಿಲ್ಲ. ನಾನು ರಾಜಕಾರಣಿ ಅಲ್ಲ, ನಾನು ಆಯ್ದುಕೊಳ್ಳುವ ದಾರಿಯಲ್ಲಿ ಅವಮಾನವಿದೆ .ಆದರೂ, ಮಂಡ್ಯದ ಜನರ ಪ್ರೀತಿ, ವಿಶ್ವಾಸ ಕಳೆದುಕೊಳ್ಳಲು ಇಷ್ಟವಿಲ್ಲ. ಕೆಲವರಿಗೆ ಇದರಿಂದ ಅನೂಕೂಲವಾಗದಿರಬಹುದು ಅಂಬಿ ಮೇಲಿನ ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ.

ಮಾಜಿ ಮುಖ್ಯಮಂತ್ರಿ ಕೃಷ್ಣ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರೆಲ್ಲ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಸೋಲು -ಗೆಲುವು ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗೆದ್ದರೆ ಅದು ಮಂಡ್ಯ ಜನರ ಗೆಲುವೆ ಹೊರತು ನನ್ನ ವೈಯಕ್ತಿಕ ಗೆಲುವಲ್ಲ.

ತಮಗೆ ಧೈರ್ಯ ತುಂಬಲು ಯಶ್, ದರ್ಶನ್, ರಾಕ್ ಲೈನ್ ವೆಂಕಟೇಶ್ ಮತ್ತಿತರ ಚಿತ್ರರಂಗದವರು ಮುಂದಾಗಿದ್ದಾರೆ. ಯಾರನ್ನೂ ನೋಯಿಸಲು ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ‌ಯಾಚಿಸುತ್ತೇನೆ. ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ. ಇದೇ 20ರಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ.’

ನಟರಾದ್ ಯಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply