ಬಿಜೆಪಿ ಸೋಲಿಸೋದೆ ನಮ್ಮ ಏಕೈಕ ಗುರಿ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯನ್ನು ಸೋಲಿಸೋದೆ ನಮ್ಮ ಮುಖ್ಯ ಗುರಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಕೆಲವು ಜಿಲ್ಲೆಗಳಲ್ಲಿ ಉದ್ಭವಿಸಿರುವ ಆಂತರಿಕ ಭಿನ್ನಾಭಿಪ್ರಾಯ ಕುರಿತು ಮಂಗಳವಾರ ನಡೆದ ಉಭಯ ಪಕ್ಷಗಳ ನಾಯಕರ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಅವರ ಪರ ಪ್ರಚಾರ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲು ನಿರ್ಧರಿಸಲಾಗಿದೆ.

ಸಭೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಸಭೆಯಲ್ಲಿ ಎರಡು ಪಕ್ಷಗಳ ಒಟ್ಟಾಗಿ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಎರಡು ಪಕ್ಷಗಳು ಚುನಾವಣೆ ಘೋಷಣೆಯಾದ ಬಳಿಕ ಮೈತ್ರಿ ಮಾಡಿಕೊಂಡಿಲ್ಲ. ಕಳೆದ ವರ್ಷ ವಿಧಾನಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ರಚನೆ ಮಾಡುವಾಗಲೇ ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು.

ಈಗಾಗಲೇ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಮೈತ್ರಿಗೆ ಭರ್ಜರಿ ಜಯ ದಾಖಲಾಗಿದೆ. ಶಿವಮೊಗ್ಗದಲ್ಲಿ ಸ್ವಲ್ಪ ಅಂತರದಿಂದ ಸೋತೆವು. ಉಳಿದ ಕ್ಷೇತ್ರಗಳಾದ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳು, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಗೆದ್ದೇವು. ಈ ಬಾರಿ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಪದೇ ಪದೇ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದೆ. ಅದು ಸಾಧ್ಯವಿಲ್ಲ. ಇಷ್ಟು ದಿನಗಳ ಕಾಲ ಜಾತ್ಯಾತೀತ ಮತಗಳು ವಿಭಜನೆಯಾಗುತ್ತಿತ್ತು. ಹೀಗಾಗಿ ಬಿಜೆಪಿ ಗೆಲ್ಲುತ್ತಿತ್ತು. ಆದರೆ ಈಗ ಜಾತ್ಯಾತೀತ ಮತಗಳು ವಿಭಜನೆ ಆಗುವುದಿಲ್ಲ. ಈ ಬಾರಿ ಅದಕ್ಕೆ ಅವಕಾಶ ಆಗದಂತೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಕ್ಷೇತ್ರ ಹಂಚಿಕೆಯಾಗಿದೆ, ಒಂದೆರೆಡು ದಿನದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗುತ್ತದೆ.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿ ಹಾಗೂ ಕೋಮುವಾದಿಗಳನ್ನು ಮಣಿಸಲು ಈ ಮೈತ್ರಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಎರಡೂ ಪಕ್ಷಗಳ ಜಿಲ್ಲಾ ಮಟ್ಟದ ನಾಯಕರಿಂದ ಹಿಡಿದು ರಾಷ್ಟ್ರ ಮಟ್ಟದ ನಾಯಕರು ತಮ್ಮ ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾ.31ರಂದು ಬೃಹತ್ ಸಮಾವೇಶ ನಡೆಯಲಿದೆ. ಅದರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಜಂಟಿಯಾಗಿ ಭಾಗವಹಿಸುತ್ತಾರೆ. ಈ ಐತಿಹಾಸಿಕ ಸಮಾವೇಶದಿಂದಲೇ ಚುನಾವಣಾ ರಣಕಹಳೆ ಆರಂಭಿಸುತ್ತೇವೆ. ರಾಜ್ಯದಲ್ಲಿರುವ 28 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಅದಕ್ಕೆ ಬೇಕಾದಂತೆ ಕಾರ್ಯಕರ್ತರನ್ನು ಹುರಿದುಂಬಿಸುತ್ತೇವೆ.’

Leave a Reply