ಮಂಡ್ಯ, ಹಾಸನಕ್ಕೆ ಮದ್ದು ಅರೀತಾರಾ ದೋಸ್ತಿಗಳು!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ನಡುವೆ ದೊಡ್ಡ ಕಂದಕ ಉಂಟಾಗಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಸನದಲ್ಲೂ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ದು, ಅಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಎ.ಮಂಜು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಅಲ್ಲೂ ಕೂಡ ಜೆಡಿಎಸ್‌ಗೆ ಪೆಟ್ಟು ಬೀಳುವ ಸಾಧ್ಯತೆಯಿದೆ.

ಕಾಂಗ್ರೆಸ್ – ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಆಕ್ರೋಶಗೊಂಡಿದ್ದು, ಜೆಡಿಎಸ್ ಬೆಂಬಲಿಸಲ್ಲ ಎಂದು ಮಂಡ್ಯದಲ್ಲಿ ಹೇಳಿದ್ರೆ, ಹಾಸನದಲ್ಲಿ ಎ.ಮಂಜು ಬೆಂಬಲಿಗರು ಸೇರಿದಂತೆ ಜಿಲ್ಲೆಯಾದ್ಯಂತ ಕಾರ್ಯಕರ್ತರ ಪಡೆಯ ಜೊತೆಗೆ ಕಮಲ ಪಕ್ಷ ಸೇರುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಪಕ್ಷ ಗೆಲುವಿಗೆ ಹರಸಾಹಸ ಪಡಬೇಕಾದ ಸ್ಥಿತಿ ಉಂಟಾಗಿದೆ.

ಇದ್ರಿಂದ ಕಂಗಾಲಾಗಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇಂದು ಸಭೆ ಕರೆದಿದ್ದು, ಹಾಸನ, ಮಂಡ್ಯ ಸೇರಿದಂತೆ ಮೈಸೂರಿಗೂ ಮದ್ದು ಮಾಡಲು ಮುಂದಾಗಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತೋ ಅದೇ ರೀತಿ ಜೆಡಿಎಸ್ ಕೂಡ ಮೈಸೂರಲ್ಲಿ ನಡೆದುಕೊಳ್ಳಲಿದೆ. ಒಂದು ವೇಳೆ ಮಂಡ್ಯದಲ್ಲಿ‌ ಏನಾದರೂ ಹೆಚ್ಚುಕಡಿಮೆ ಆದರೆ ಮೈಸೂರನ್ನು ಮರೆತುಬಿಡಿ ಎಂದು ಸಚಿವ ಸಾ.ರಾ. ಮಹೇಶ್ ಎಚ್ಚರಿಸಿದ್ರು. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಮೈತ್ರಿ ಪಕ್ಷದ ನಾಯಕರು ಮುಂದಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಹಾಜರಾಗಲಿದ್ದಾರೆ. ಮುಂದಿನ ಚುನಾವಣಾ ಪ್ರಚಾರಕ್ಕೆ ಒಟ್ಟಾಗಿ ಹೋಗುವುದು, ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶ ಕೊಡದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಈಗಾಗಲೇ ಖಾಸಗಿ ಹೋಟೆಲ್‌ನಲ್ಲಿ ಸಭೆ ಆರಂಭವಾಗುತ್ತಿದ್ದು, ಮಧ್ಯಾಹ್ನ 12.30ಕ್ಕೆ‌ ಜಂಟಿ ಸುದ್ದಿಗೋಷ್ಠಿ‌ ನಡೆಸಲು ಮುಂದಾಗಿದ್ದು, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಜಂಟಿ ಸುದ್ದಿಗೋಷ್ಠಿ‌ಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ.

ಚುನಾವಣೆಯಲ್ಲಿ ಒಟ್ಟಿಗೆ ಪ್ರಚಾರ, ದೋಸ್ತಿ ನಾಯಕರ ಸೀಟು ಹಂಚಿಕೆ, ಎಲ್ಲೆಲ್ಲಿ ಒಟ್ಟಿಗೆ ಚುನಾವಣಾ ಪ್ರಚಾರ ಕೈಗೊಳ್ಳಬೇಕು, ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟದ ಬಗ್ಗೆ ಮಾಹಿತಿ ತಿಳಿಸುವ ಸಾಧ್ಯತೆಯಿದೆ. ಆದ್ರೆ ಬಿಕ್ಕಟ್ಟು ಉಂಟಾಗಿರುವ ಮಂಡ್ಯ ಹಾಗೂ ಹಾಸನ ಮತ್ತು ಮೈಸೂರಿನ ಸಮಸ್ಯೆಗೆ ಮುಕ್ತಿ ಕೊಡ್ತಾರಾ ದೋಸ್ತಿ ನಾಯಕರು ಅನ್ನೋ ಕುತೂಹಲ ಮೂಡಿಸಿದೆ.

Leave a Reply