ಮೈತ್ರಿಯಲ್ಲಿ ಗೊಂದಲ ಇಲ್ಲ, ರಾಜ್ಯದಲ್ಲಿ ಬಿಜೆಪಿ ಎರಡಂಕಿ ದಾಟಲು ಬಿಡಲ್ಲ: ದೇವೇಗೌಡ

ಡಿಜಿಟಲ್ ಕನ್ನಡ ಟೀಮ್:

‘ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ. ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸುವುದೇ ನಮ್ಮ ಗುರಿ, ರಾಜ್ಯದಲ್ಲಿ ಬಿಜೆಪಿ ಎರಡಂಕಿ ದಾಟಲು ಬಿಡುವುದಿಲ್ಲ…’ ಇದು ಮಂಗಳವಾರ ಮಾಜಿ ಪ್ರಧಾನಿ ದೇವೇಗೌಡ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಸಭೆ ನಂತರ ಹೇಳಿದ ಮಾತು.

ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಎದ್ದಿರುವ ಆಂತರಿಕ ಭಿನ್ನಮತ ಶಮನಕ್ಕೆ ಸಭೆ ನಡೆಸಲಾಯಿತು. ಈ ಸಭೆಯ ನಂತರ ಮಾತನಾಡಿದ ಮಾಜಿ ಪ್ರಧಾನಿ ಗೌಡರು ಹೇಳಿದ್ದಿಷ್ಟು,

‘ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಇದ್ದ ಆಂತರಿಕ ಬಿಕ್ಕಟ್ಟನ್ನು ಇಂದಿನ ಸಭೆಯಲ್ಲಿ ನಿವಾರಿಸಿಕೊಂಡಿದ್ದೇವೆ. ಇನ್ನು ಮುಂದೆ ನಮ್ಮಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಮೈತ್ರಿ ಸರ್ಕಾರ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದು, ಇನ್ನು ಮುಂದೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ಸಂದೇಶವನ್ನು ಈ ಸಭೆಯ ಮೂಲಕ ರಾಜ್ಯದ ಜನತೆಗೆ ರವಾನಿಸಲು ಇಚ್ಚಿಸುತ್ತೇನೆ.

ನಾನು ಸಿದ್ದರಾಮಯ್ಯ ಒಟ್ಟಿಗೆ ರಾಜ್ಯ ಪ್ರವಾಸ ಮಾಡಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಹೋರಾಡಲು ನಿರ್ಧರಿಸಿದ್ದೇವೆ. ಎರಡೂ ಪಕ್ಷಗಳ ನಾಯಕರು ಮಾಧ್ಯಮಗಳ ಮುಂದೆ ಭಿನ್ನ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಿದ್ದೇವೆ. ಎರಡೂ ಪಕ್ಷಗಳು ಪ್ರತ್ಯೇಕವಾಗಿ ವಕ್ತಾರರನ್ನು ನೇಮಿಸುವ ಬದಲು ಎರಡೂ ಪಕ್ಷಗಳು ಸೇರಿ ವಕ್ತಾರರ ನೇಮಕಕ್ಕೆ ಸಲಹೆ ನೀಡಿದ್ದೇನೆ.

ಸದ್ಯ ನಮ್ಮಲ್ಲಿರುವ 12 ಕ್ಷೇತ್ರಗಳ ಜತೆಗೆ ಬಿಜೆಪಿಯ 16 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳನ್ನು ಒಟ್ಟಾಗಿ ಗೆಲ್ಲುತ್ತೇವೆ. ಬಿಜೆಪಿ ಎರಡಂಕಿಯನ್ನು ದಾಟಲು ಬಿಡುವುದಿಲ್ಲ ಎಂದು ಸದ್ಯಕ್ಕೆ ಹೇಳುತ್ತೇನೆ. ಆ ಮೂಲಕ ಎತ್ತರದ ಧ್ವನಿಯಲ್ಲಿ ಮಾತನಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ.

ಇದೇ ತಿಂಗಳು 31ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಭೆ ನಡೆಸಲು ನಿರ್ಧರಿಸಿದ್ದೇವೆ. ಈ ಸಭೆಯಲ್ಲಿ ಎರಡೂ ಪಕ್ಷಗಳ ನಾಯಕರು ಭಾಗವಹಿಸುತ್ತೇವೆ. ಈ ಸಭೆಯಲ್ಲಿ ರಾಹುಲ್ ಅವರು ನೀಡುವ ಮಾರ್ಗದರ್ಶನದಂತೆ ನಾವೆಲ್ಲರೂ ಜವಾಬ್ದಾರಿ ಹಂಚಿಕೊಂಡು ಚುನಾವಣೆಗೆ ಸಿದ್ಧತೆ ಮಾಡುತ್ತೇವೆ.

ನನಗೆ ಇನ್ನೆರಡು ತಿಂಗಳಲ್ಲಿ 87 ವರ್ಷ ಪೂರೈಸುತ್ತದೆ. ಹೀಗಾಗಿ ನಾನು ಮೂರು ವರ್ಷಗಳ ಹಿಂದೆಯೇ ಹಾಸನವನ್ನು ಪ್ರಜ್ವಲ್ ಗೆ ಬಿಟ್ಟುಕೊಡುವುದಾಗಿ ಮಾತು ನೀಡಿದ್ದೆ. ಹೀಗಾಗಿ ನಾನು ಮತ್ತೆ ಹಾಸನದಿಂದ ಸ್ಪರ್ಧಿಸುವ ಮಾತಿಲ್ಲ. ನನ್ನ ಸ್ಪರ್ಧೆ ಬಗ್ಗೆ ಇನ್ನು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಕಳೆದ ಅಧಿವೇಶನದಲ್ಲಿ ಮಾತನಾಡುತ್ತಾ ಇದು ನನ್ನ ಕೊನೆ ಭಾಷಣ ಎಂದಿದ್ದೆ. ಆದರೆ ಬಿಜೆಪಿ ನಾಯಕರ ವರ್ತನೆ ನಮ್ಮನ್ನು ಪ್ರಚೋದಿಸುತ್ತಿವೆ. ರಾಜ್ಯದ ಹಾಗೂ ಬೇರೆ ರಾಜ್ಯಗಳ ಮುಖಂಡರು ಸ್ಪರ್ಧೆ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಸ್ಪರ್ಧೆ ತೀರ್ಮಾನವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇನೆ.’

Leave a Reply