ತಾಯಿ ಚಾಮುಂಡೇಶ್ವರಿ ಆಶೀರ್ವಾದ, ಅಭಿಮಾನಿಗಳ ಬೆಂಬಲದೊಂದಿಗೆ ಸುಮಲತಾ ನಾಮಪತ್ರ ಸಲ್ಲಿಕೆ

ಡಿಜಿಟಲ್ ಕನ್ನಡ ಟೀಮ್:

ನಾಡ ದೇವತೆ ಚಾಮುಂಡೇಶ್ವರಿ ದರ್ಶನ, ಆಶೀರ್ವಾದ ಹಾಗೂ ಸಾವಿರಾರು ಅಭಿಮಾನಿಗಳ ಬೆಂಬಲದೊಂದಿಗೆ ಸುಮಲತಾ ಅಂಬರೀಶ್ ಅವರು ಬುಧವಾರ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅವರು ನೇರವಾಗಿ ಮಂಡ್ಯ ತಾಲೂಕು ಇಂಡುವಾಳಿಗೆ ಆಗಮಿಸಿ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರ ನಿವಾಸಕ್ಕೆ ತೆರಳಿದರು. ಈ ವೇಳೆ ನಟ ಯಶ್ ಸುಮಲತಾ ಅವರಿಗೆ ಸಾಥ್ ಕೊಟ್ಟರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುಮಲತಾ, ಪುತ್ರ ಅಭಿಷೇಕ್, ನಟ ಯಶ್, ರಾಕಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್ ಸೋದರನ ಪುತ್ರ ಮಧುಸೂದನ್ ಸೇರಿದಂತೆ ಹಲವು ಆಪ್ತರು ಹಾಗೂ ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ
ನಾಮಪತ್ರ ಸಲ್ಲಿಸಿದರು.

ಸುಮಲತಾ ಅವರು ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜೈಕಾರ ಕೂಗುತ್ತಾ ಬೆಂಬಲ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಕೆ ನಂತರ ಸುಮಲತಾ ಅವರು ಮೆರವಣಿಗೆ ಮೂಲಕ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶಕ್ಕೆ ತೆರಳಿದರು.

ಇನ್ನು ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಿರಿಯ ನಾಯಕರು ಸಭೆ ನಡೆಸಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬ ಸಂದೇಶ ರವಾನಿಸಿದರೂ ಇಂದು ಸುಮಲತಾ ಅವರ ಜತೆ ಕಾಂಗ್ರೆಸ್ ನಾಯಕರು ಗುರುತಿಸಿಕೊಂಡಿರುವುದು ಮೈತ್ರಿಗೆ ದೊಡ್ಡ ಸವಾಲಾಗಿದೆ.

ಇಂದು ಸುಮಲತಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಮಲತಾ ಪರವಾಗಿ ಮೂವತ್ತು ಸೂಚಕರು ಸಹಿ ಹಾಕಿದ್ದು, ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಮಂಡ್ಯ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. ತಮ್ಮ ನಡೆ ಬಗ್ಗೆ ಸ್ಪಷ್ಟನೆ ನೀಡಿದ ಇಂಡುವಾಳು ಸಚ್ಚಿದಾನಂದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸುಮಲತಾ ಅವರನ್ನು ಬೆಂಬಲಿಸುತ್ತಿದ್ದು, ಸಂಧಾನಕ್ಕಾಗಿ ಪಕ್ಷದ ವರಿಷ್ಠರು ಜಿಲ್ಲೆಗೆ ಆಗಮಿಸುವುದು ಬೇಡ. ಜಿಲ್ಲೆಯಲ್ಲಿ ಪಕ್ಷದ ಉಳಿವಿಗಾಗಿ ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆ’ ಎಂದರು.

ಮೆರವಣಿಗೆಯಲ್ಲಿ ಚಿತ್ರರಂಗದ ಗಣ್ಯರಾದ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಸೇರಿದಂತೆ ಅನೇಕ ನಟ ನಟಿಯರು ಭಾಗಿಯಾಗಿದ್ದರು.

Leave a Reply