ಕುಡಿಯುವ ನೀರು ಬಿಡುಗಡೆಗಾಗಿ ಮಹಾರಾಷ್ಟ್ರ ಸಿಎಂಗೆ ಡಿಕೆಶಿ ಪತ್ರ

ಡಿಜಿಟಲ್ ಕನ್ನಡ ಟೀಮ್:

ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಪ್ರದೇಶದ ಜನರ ಕುಡಿಯುವ ನೀರಿಗಾಗಿ ತಕ್ಷಣವೇ ಕೊಯ್ನಾ ಹಾಗೂ ಉಜ್ಜನಿ ಅಣೆಕಟ್ಟಿನಿಂದ ಕೃಷ್ಣ ಹಾಗೂ ಭೀಮಾ ನದಿಗಳಿಗೆ ನೀರು ಹರಿಸಬೇಕು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ.

ಬರ ಪರಿಸ್ಥಿತಿಯಿಂದಾಗಿ ಈ ನಾಲ್ಕು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಸಚಿವರು ನೆರೆ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದ ಸಾರಾಂಶ ಹೀಗಿದೆ…

‘ಕಳೆದ ಜನವರಿ 16ರಂದು ಔರಂಗಾಬಾದ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸೂಕ್ಷ್ಮ ನೀರಾವರಿ ವಿಚಾರ ಸಂಕಿರಣದ ವೇಳೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿನ ಭೀಕರ ಬರ ಪರಿಸ್ಥಿತಿ ಕುರಿತು ನಾವಿಬ್ಬರೂ ಚರ್ಚೆ ಮಾಡಿದ್ದು, ನಿಮಗೆ ನೆನಪಿದೆ ಎಂದು ಭಾವಿಸುತ್ತೇನೆ.

ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ರಾಜ್ಯ ಈ ಭಾರಿ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂಗಾರಿನ ಮಳೆ ಕೊರತೆಯಿಂದ ಹಾಗೂ ಮಾರ್ಚ್ ಆರಂಭದಲ್ಲೇ ತೀರ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಮಹಾರಾಷ್ಟ್ರ ಸರ್ಕಾರ ಈ ಹಿಂದೆಯೂ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರು ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲು ಕರ್ನಾಟಕಕ್ಕೆ ಕುಡಿಯಲು ನೀರು ಹರಿಸಿತ್ತು.

ಹೀಗಾಗಿ ಈ ಬಾರಿಯೂ ಮಾನವೀಯತೆ ಆಧಾರದ ಮೇಲೆ ಜನರು ಹಾಗೂ ಪ್ರಾಣಿ ಪಕ್ಷಿಗಳ ಕುಡಿಯುವ ನೀರು ಪೂರೈಸಲು ಕೊಯ್ನಾದಿಂದ ಕೃಷ್ಣ ನದಿಗೆ 2 ಟಿಎಂಸಿ ಹಾಗೂ ಉಜ್ಜನಿಯಿಂದ ಭೀಮಾ ನದಿಗೆ 2 ಟಿಎಂಸಿ ನೀರನ್ನು ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.’

Leave a Reply