ಮಂಡ್ಯ ಎಲೆಕ್ಷನ್ ಎಫೆಕ್ಟ್: ಒಡೆದು ಹೋಳಾಗುತ್ತಾ ಕನ್ನಡ ಚಿತ್ರರಂಗ..?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮಂಡ್ಯದಲ್ಲಿ ಸ್ಪರ್ಧೆ ಮಾಡಿರೋ ಇಬ್ಬರು ಘಟಾನುಘಟಿ ಸ್ಪರ್ಧಾಳುಗಳು ಸಿನಿಮಾ ರಂಗದ ಹಿನ್ನೆಲೆ ಹೊಂದಿರುವವರು ಅನ್ನೋದು ಪ್ರಮುಖವಾಗಿದ್ದು, ಎರಡೂ ಕುಟುಂಬಗಳು ರಾಜಕೀಯದಲ್ಲೂ ಛಾಪು ಮೂಡಿಸಿವೆ. ಹೀಗಾಗಿ ಈ ಬಾರಿಯ ಮಂಡ್ಯ ಲೋಕಸಭೆ ಚುನಾವಣೆ ಚಂದನವನವನ್ನು ಇಬ್ಬಾಗ ಮಾಡುತ್ತಾ ಅನ್ನೋ ಪ್ರಶ್ನೆ ಹುಟ್ಟಿಸಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿರುವ ಅಂಬರೀಶ್ ಪತ್ನಿ ಸುಮಲತಾ ಕೂಡ ಚಿತ್ರರಂಗದಲ್ಲಿ ನಾಯಕಿಯಾಗಿ ತಾಯಿಯಾಗಿ ಅಭಿನಯ ಮಾಡಿದ್ದಾರೆ. ಅವರ ಪತಿ ಅಂಬರೀಶ್ ಕನ್ನಡ ಚಿತ್ರರಂಗವೇ ಗೌರವಿಸುವ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆಗಿರುವ ನಿಖಿಲ್ ಕೂಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ನಿರ್ಮಾಪಕರಾಗಿ ಸ್ಯಾಂಡಲ್‌ನಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈ ಎರಡು ಕುಟುಂಬಗಳ ಪೈಪೋಟಿಯಲ್ಲಿ ಸಿಲುಕಿರುವ ಕನ್ನಡ ಚಿತ್ರರಂಗ ಒಡೆದು ಹೋಳಾಗುವ ಭೀತಿ ಸೃಷ್ಟಿಸಿದೆ.

ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸುಮಲತಾಗೆ ಬಹಿರಂಗ ಬೆಂಬಲ ಘೋಷಣೆ ಮಾಡಿದ್ದು, ಬುಧವಾರ ನಾಮಪತ್ರ ಸಲ್ಲಿಕೆ ವೇಳೆ ಹಾಗೂ ಬೃಹತ್ ರ‌್ಯಾಲಿ, ಸಮಾವೇಶ ಹೀಗೆ ಎಲ್ಲಾ ಕಡೆಯಲ್ಲೂ ಸಾಥ್ ನೀಡಿದರು. ಬಳಿಕ ವೇದಿಕೆ ಮೇಲೂ ಸುಮಲತಾ ಪರವಾಗಿ ಅಬ್ಬರಿಸಿದ ನಾಯಕ ನಟರು, ಸಿನಿಮಾ ಸ್ಟೈಲ್‌ನಲ್ಲೇ ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿದ್ರು. ನಟ ದೊಡ್ಡಣ್ಣ ಹಾಗೂ ನಟ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಸುಮಲತಾ ಬೆಂಬಲಿಸುವಂತೆ ಕರೆ ನೀಡಿದ್ರು. ಇದರ ಜೊತೆಗೆ ರಾಕ್‌ಲೈನ್ ವೆಂಕಟೇಶ್ ಈ ಹಿಂದೆ ನೀಡಿದ್ದ ಹೇಳಿಕೆ ಚಿತ್ರರಂಗಕ್ಕೆ ಕಂಟಕವಾಗುವ ಸಾಧ್ಯತೆಯಿದೆ. ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಎಲ್ಲಾ ನಟ ನಟಿಯರೂ ಕೂಡ ಸುಮಲತಾ ಪರ ಮತಯಾಚನೆ ಮಾಡ್ತಾರೆ. ಈ ವಿಚಾರವನ್ನು ಸ್ವತಃ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ ಎಂದಿದ್ದರು.

ಇದೀಗ ರಾಕ್‌ಲೈನ್ ವೆಂಕಟೇಶ್ ಮಾತಿಗೆ ಸ್ವತಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿ ಪೋಸ್ಟ್ ಹಾಕಿರುವ ನಟ ಪುನೀತ್ ರಾಜಕುಮಾರ್, ‘ನಾನು ಯಾರ ಪರವೂ ಅಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸುಮಲತಾ ಪರ ಪ್ರಚಾರಕ್ಕೆ ಹೋಗಲ್ಲ ಎಂದಿದ್ದಾರೆ.

‘ನನಗೂ ರಾಜಕಾರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳ್ತೇನೆ ರಾಜಕಾರಣದ ಜೊತೆಗಲ್ಲ ಎಂದಿದ್ದಾರೆ. ಇನ್ನು ದೇವೆಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಇದ್ದ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಹಾಗಾಗಿ ಇಬ್ಬರಿಗೂ ಒಳ್ಳೆಯದಾಗಲಿ. ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಚುನಾವಣೆಗೆ, ರಾಜಕಾರಣಕ್ಕೆ ಸಂಬಂಧಿಸಿದಂತೆ ಬಳಸಬೇಡಿ’ ಅಂತ ವಿನಂತಿಸಿದ್ದಾರೆ.

ಇದಕ್ಕೂ ಮೊದಲೇ ನಟ ಸುದೀಪ್ ಕೂಡ ಬೇಸರದ ಹೇಳಿಕೆ ನೀಡಿದ್ರು.‌ ದರ್ಶನ್ ಹಾಗೂ ಯಶ್ ನನ್ನ ಶಕ್ತಿ ಎಂದು ಸುಮಲತಾ ಹೇಳಿದ್ರು. ಈ ಮಾತಿಗೆ ವ್ಯಂಗ್ಯದ ಉತ್ತರ ಕೊಟ್ಟಿದ್ದ, ಕಿಚ್ಚ ಸುದೀಪ್, ‘ದರ್ಶನ್ ಇದ್ದರೆ ಸಾಕು ಗೆಲುವು ಸಿಗುತ್ತೆ, ನಾವೆಲ್ಲಾ ಹೋಗಿ ಅಲ್ಲಿ ಮಾಡುವುದು ಏನಿಲ್ಲ’ ಎಂದು ಹೇಳಿಕೆ ನೀಡಿದ್ರು.‌

ಜೆಡಿಎಸ್ ಕೂಡ ಸ್ಟಾರ್ ನಟರ ಮೊರೆ ಹೋಗಲು ಸಿದ್ಧತೆ ನಡೆಸಿದೆ. ತಮ್ಮ ಬ್ಯಾನರ್ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿಕೊಟ್ಟಿರುವವರು ಸೇರಿದಂತೆ ಸಾಕಷ್ಟು ಜನರ ಲಿಸ್ಟ್ ರೆಡಿಯಾಗಿದೆ ಎನ್ನಲಾಗಿದ್ದು, ಅನಿವಾರ್ಯವಾದರೆ ಜೆಡಿಎಸ್ ಪರವಾಗಿ ಸ್ಟಾರ್ ನಟರು ಫೀಲ್ಡಿಗಿಳೀತಾರೆ ಎನ್ನಲಾಗಿದೆ. ಈ ನಡುವೆ ನಮ್ಮನ್ನು ಒಂದು ಮಾತೂ ಕೇಳದೆ ಇಡೀ ಚಿತ್ರರಂಗವೇ ಮಂಡ್ಯದಲ್ಲಿ ಪ್ರಚಾರ ಮಾಡಲಿದೆ ಎಂದು ತಿಳಿಸಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Leave a Reply