ನಿಖಿಲ್​ ನಾಮಿನೇಷನ್​ ಗೊಂದಲ ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲೇ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿನ್ನೆ ಸುಮಲತಾ ಅಂಬರೀಶ್​, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಜೆಡಿಎಸ್​ ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ನಾಮಪತ್ರ ಸಲ್ಲಿಕೆ ರದ್ದಾಗಿದೆ.

ಈ ಹಿಂದೆ ಮಾರ್ಚ್​ 25ರ ಸೋಮವಾರ ಬೃಹತ್​ ಸಮಾವೇಶದ ಮೂಲಕ ನಾಮಪತ್ರ ಸಲ್ಲಿಕೆಗೆ ಈಗಾಗಲೇ ಸಮಯ ನಿಗದಿಯಾಗಿತ್ತು. ಆದ್ರೆ ಜ್ಯೋತಿಷಿಗಳ ಸಲಹೆಯಿಂದಾಗಿ ಗುರುವಾರ ಪುಬ್ಬ ನಕ್ಷತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಇಂದು ಏಕಾಏಕಿ ನಾಮಪತ್ರ ಸಲ್ಲಿಕೆ ರದ್ದು ಮಾಡಲಾಗಿದೆ.

ಧಾರವಾಡ ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಇವತ್ತು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೀಗಾಗಿ ಧಾರವಾಡಕ್ಕೆ ಸಿಎಂ ಕುಮಾರಸ್ವಾಮಿ ತೆರಳುವ ನಿರ್ಧಾರ ಮಾಡಿದ್ದು, ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆಗೆ ಮಗ ನಿಖಿಲ್​ ಜೊತೆ ಭಾಗವಹಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಿಖಿಲ್​ ಇವತ್ತು ನಾಮಪತ್ರ ಸಲ್ಲಿಕೆ ಮಾಡದೆ, ನೇರವಾಗಿ ಸೋಮವಾರವೇ ನಾಮಪತ್ರ ಸಲ್ಲಿಕೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಜೆಡಿಎಸ್​ ಮೂಲಗಳು ತಿಳಿಸಿವೆ.

ಆದ್ರೆ ಜ್ಯೋತಿಷ್ಯ, ದೇವರು ದಿಂಡರು ಎಂದರೆ ಚಾಚೂತಪ್ಪದೆ ಪಾಲನೆ ಮಾಡುವ ದೇವೇಗೌಡರ ಕುಟುಂಬ ಧಾರವಾಡ ದುರಂತಕ್ಕಾಗಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ರದ್ದು ಮಾಡಿಲ್ಲ. ಆದ್ರೆ ಸುಮಲತಾ ಅಂಬರೀಶ್​, ಈಗಾಗಲೇ ಭಾರೀ ಜನಸಾಗರದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವತ್ತು ನಿಖಿಲ್​ ಕುಮಾರಸ್ವಾಮಿ ಬೃಹತ್​ ಜನಸಾಗರದ ಜೊತೆ ತೆರಳದೆ ಏಕಾಂಗಿಯಾಗಿ ಅಥವಾ ಕುಟುಂಬಸ್ಥರ ಜೊತೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ರೆ, ಮತ್ತೆ ವಿರೋಧಿ ಪಾಳಯ ಟ್ರೋಲ್​ ಮಾಡುವ ಸಾಧ್ಯತೆ ಇರುವ ಕಾರಣಕ್ಕೆ ನಾಮಪತ್ರ ಸಲ್ಲಿಕೆ ಮಾಡೋದು ಬೇಡ. ಸೋಮವಾರವೇ ಅದ್ಧೂರಿಯಾಗಿ ಬೆಂಬಲಿಗರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್​ ಸಮಾವೇಶ ನಡೆಸೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ.

Leave a Reply