ಹೃದಯಾಘಾತ: ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ನಿಧನ

ಡಿಜಿಟಲ್ ಕನ್ನಡ ಟೀಮ್:

ತೀವ್ರ ಹೃದಯಾಘಾತದಿಂದ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಕುಂದಗೋಳದ ಕಾಂಗ್ರೆಸ್ ಶಾಸಕರಾಗಿದ್ದ ಸಿಎಸ್ ಶಿವಳ್ಳಿ ಅವರು ಇಂದು ಮಧ್ಯಾಹ್ನ 1.30ರ ಸುಮಾರಿಗೆ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಅವರನ್ನು ತಕ್ಷಣವೇ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಯಶಸ್ವಿಯಾಗದೇ ನಿಧನರಾಗಿದ್ದಾರೆ.

ಈ ಹಿಂದೆ ಹೃದಯ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದ ಸಚಿವರು, ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳಕ್ಕೆ ಆಗಮಿಸಿ, ದಿಗ್ಬ್ರಮೆ ವ್ಯಕ್ತ ಪಡಿಸಿದ್ದರು. ಅಲ್ಲದೆ ನಿನ್ನೆ ಮಧ್ಯರಾತ್ರಿಯವರೆಗೂ ಕಟ್ಟಡ ದುರಂತ ಸ್ಥಳದಲ್ಲಿದ್ದು, ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು.

ಮೂರು ದಶಕಗಳಿಂದ ರಾಜಕೀಯದಲ್ಲಿದ್ದ ಶಿವಳ್ಳಿ, ಆರು ಬಾರಿ ಸ್ಪರ್ಧೆ ಮಾಡಿ, ಮೂರು ಬಾರಿ ಗೆಲುವು ಸಾಧಿಸಿದ್ದರು. ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಅಧ್ಯಕರೂ ಆಗಿದ್ದ ಅವರು, 1994ರಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಶಿವಳ್ಳಿ ಮೊದಲ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಅವರು, 2008ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತರು. 2013 ಮತ್ತು 2018ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

Leave a Reply