ಗೌಡರಿಗೆ ತುಮಕೂರಿನಲ್ಲಿ ಎದುರಾಗಿದೆ ಸತ್ವ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್:

ತಮ್ಮ ತವರು ಕ್ಷೇತ್ರ ಹಾಸನದ ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಈಗ ಅಳೇದು ತೂಗಿ ತುಮಕೂರಿನಿಂದ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಅವರಿಗೆ ಸತ್ವ ಪರೀಕ್ಷೆ ಎದುರಾಗುವ ಸೂಚನೆ ದಟ್ಟವಾಗಿದೆ.

ಹೌದು, ಸೋಮವಾರ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಸಿದ್ಧತೆ ನಡೆಸಿದ್ದಾರೆ. ತುಮಕೂರಿನಲ್ಲಿ ಜೆಡಿಎಸ್ ಶಾಸಕರ ಪ್ರಾಬಲ್ಯವಿದ್ದು, ದೇವೇಗೌಡರನ್ನು ಗೆಲ್ಲಿಸುವುದಾಗಿ ಜೆಡಿಎಸ್ ಶಾಸಕರುಗಳು ಶಪಥ ಮಾಡಿದ್ದಾರೆ. ಹೀಗಾಗಿಯೇ ಬೆಂಗಳೂರು ಉತ್ತರಕ್ಕಿಂತ ತುಮಕೂರು ಉತ್ತಮ ಎಂದು ಅಳೆದು ತೂಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದಾರೆ. ಆದರೆ ಗೌಡರಿಗೆ ಇಲ್ಲಿ ಕಾಂಗ್ರೆಸ್ ನ ಹಾಲಿ ಸಂಸದ ಮುದ್ದ ಹನುಮೇಗೌಡ ಅವರು ಪಕ್ಷೇತರರಾಗಿ ನಿಲ್ಲುವ ಸುದ್ದಿ ಬಂದಿದ್ದು, ಇದು ನಿಜಕ್ಕೂ ದೇವೇಗೌಡರಿಗೆ ದೊಡ್ಡ ಸವಾಲಿನ ವಿಚಾರವಾಗಿದೆ.

ತುಮಕೂರು ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಿದ್ದು, ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಸಿದ್ದರು. ಕೊನೆ ಕ್ಷಣದಲ್ಲಿ ಜೆಡಿಎಸ್​ನಿಂದಲೇ ಸ್ಪರ್ಧೆ ಮಾಡಲು ನಾನು ಸಿದ್ಧ ಎಂದೂ ಘೋಷಣೆ ಮಾಡಿದ್ದರು. ಯಾವುದಕ್ಕೂ ಜೆಡಿಎಸ್​ ನಾಯಕರು ಮನಸ್ಸು ಮಾಡದೇ ಇದ್ದಿದ್ರಿಂದ ಕೊನೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ದೇವೇಗೌಡರು ನಾಮಪತ್ರ ಸಲ್ಲಿಸುವ ಸೋಮವಾರವೇ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.

ತಮ್ಮ ನಿರ್ಧಾರದ ಕುರಿತಾಗಿ ಹೆಬ್ಬೂರಿನ ತೋಟದ ಮನೆಯಲ್ಲಿ ಮಹತ್ವದ ಸಭೆ ನಡೆಸಿದ ಮುದ್ದಹನುಮೇಗೌಡ, ಟಿಕೆಟ್​ ನೀಡದೇ ಇರಲು ಒಂದೇ ಒಂದು ಕಾರಣ ಹೇಳಿಲ್ಲ. ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ? ಟಿಕೆಟ್‌ಗಾಗಿ ಅಂಗಲಾಚುವ ಸ್ಥಿತಿಯನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಕಾಂಗ್ರೆಸ್​ ಜೆಡಿಎಸ್​ ಮೈತ್ರಿಯಿಂದ ಟಿಕೆಟ್ ಸಿಗದಿದ್ದರೆ ಜನರ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದಿರುವ ಮುದ್ದಹನುಮೇಗೌಡರು, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. ಮುದ್ದ ಹನುಮೇಗೌಡರ ಈ ನಿರ್ಧಾರದ ಹಿಂದೆ ಡಿಸಿಎಂ ಪರಮೇಶ್ವರ್​ ಹಾಗೂ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಒತ್ತಡವಿದೆ ಎಂಬ ವದಂತಿಗಳು ಹರಿದಾಡುತ್ತಿವೆ.

ಮುದ್ದಹನುಮೇಗೌಡರು ಸ್ಪರ್ಧೆ ಮಾಡಿದರೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಲೆಕ್ಕಾಚಾರ ತಲೆಕೆಳಗಾಗಲಿದೆ. ತುಮಕೂರು ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದ್ದು, ಒಕ್ಕಲಿಗರ ಮತಗಳು ಜೆಡಿಎಸ್​ಗೆ ಬಂದರೆ ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ಊಹೆ ಮಾಡಿದ್ದರು. ಆದರೆ ಈಗ ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ನಿಂತರೆ ಒಕ್ಕಲಿಗರ ಮತಗಳು ಹರಿದುಹಂಚಲಿದೆ. ಇದು ಸಹಜವಾಗಿ ದೇವೇಗೌಡರ ಜಯದ ಹಾದಿಗೆ ದೊಡ್ಡ ಅಡ್ಡಿಯಾಗಲಿದೆ.

ಆದರೆ…
ಮುದ್ದಹನುಮೇಗೌಡ ಅವರು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲು ಮೈತ್ರಿ ಧರ್ಮ ಪಾಲನೆಯಲ್ಲಿ ಜೆಡಿಎಸ್ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಇತರೆ ಹಿರಿಯ ನಾಯಕರು ಅವಕಾಶ ಮಾಡಿಕೊಡುತ್ತಾರೆ ಎಂಬ ಪ್ರಶ್ನೆಯೂ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಮುದ್ದಹನುಮೇಗೌಡರು ನಿರಾಶೆಯಿಂದ ಬಂಡಾಯದ ಮಾತುಗಳನ್ನಾಡುತ್ತಿದ್ದಾರೆ. ಆದರೆ ಹಿರಿಯ ಕೈ ನಾಯಕರು ಹಾಗೂ ಆಪ್ತರು ಮನವೊಲಿಸಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡಿ ಎಂದು ಮನವರಿಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

Leave a Reply