ಬಾಲ್ಯಾವಸ್ಥೆಯಿಂದ ಸಿ.ಎಸ್ ಶಿವಳ್ಳಿ ನಡೆದು‌ಬಂದ ಹಾದಿ ಹೇಗಿತ್ತು..?

ಡಿಜಿಟಲ್ ಕನ್ನಡ ಟೀಮ್:

ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಸದ್ಯ ಹೆಚ್​. ಡಿ ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಢಳಿತ ಸಚಿವರಾಗಿ ಕೆಲಸ‌ಮಾಡ್ತಿದ್ರು. ಆದ್ರೆ‌ ಸಿ.ಎಸ್ ಶಿವಳ್ಳಿ ನಡೆದು ಬಂದ ಹಾದಿ‌ ಹೇಗಿತ್ತು. ಅವರ ರಾಜಕೀಯ ಹಾದಿ‌ ಶುರುವಾಗಿದ್ದು ಹೇಗೆ ಅನ್ನೋದನ್ನು ತಿಳಿಯೋದಾದ್ರೆ…

ಬಡ ಕುಟುಂಬದಲ್ಲಿ ಹುಟ್ಟಿದ ಸಿ.ಎಸ್ ಶಿವಳ್ಳಿ ಅವರಿಗೆ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರು. ಯರಗುಪ್ಪಿಯಲ್ಲಿ ಜನಿಸಿದ ಸಿ.ಎಸ್ ಶಿವಳ್ಳಿಗೆ 58 ವರ್ಷ ವಯಸ್ಸಾಗಿತ್ತು. ಧಾರವಾಡದ ಕುಂದಗೋಳ ಶಾಸಕರಾಗಿ 6 ಬಾರಿ ಸ್ಪರ್ಧೆ ಮಾಡಿ, 3 ಬಾರಿ ಗೆಲವು ಸಾಧಿಸಿದ್ರು. 3 ದಶಕಗಳಿಂದ ರಾಜಕೀಯದಲ್ಲಿದ್ದ ಸಿ.ಎಸ್ ಶಿವಳ್ಳಿ, ಕಷ್ಟ ಎಂದು ಕೇಳಿಕೊಂಡು ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ.

ಧಾರವಾಡದ ಸುರೇಬಾನ ಪ್ರೌಢಶಾಲೆಯಲ್ಲಿ 7, 8ನೇ ತರಗತಿ ವ್ಯಾಸಂಗ ಮಾಡಿದ‌ ಸಿಎಸ್ ಶಿವಳ್ಳಿ, ಆ ಬಳಿಕ ವಿಜಯಪುರದ ಪಾಂಡುರಂಗ ದೇಸಾಯಿ ಕಾಲೇಜಿನಲ್ಲಿ 9ನೇ ತರಗತಿಯಿಂದ ಪಿಯುವರೆಗೆ ವ್ಯಾಸಂಗ ಮಾಡಿದರು. ನಂತರ ಬಂಗಾರಪ್ಪ ಮಾರ್ಗದರ್ಶನದಂತೆ ರಾಜಕೀಯ ಒಲವು ಹೆಚ್ಚಾಗಿ ವಿದ್ಯಾರ್ಥಿ ಮಟ್ಟದಲ್ಲಿ ಸಂಘಟನೆ ಆರಂಭ ಮಾಡಿದರು. 1985ರಲ್ಲಿ ಯರಗುಪ್ಪಿ ಗ್ರಾಮದಲ್ಲಿ ವರನಟ ಡಾ.ರಾಜ್‌ಕುಮಾರ್ ಅಭಿಮಾನಿ ಬಳಗ ಸ್ಥಾಪನೆ ಮಾಡಿ, ಬರೋಬ್ಬರಿ 10 ವರ್ಷಗಳ ಕಾಲ ಡಾ. ರಾಜ್‌ಕುಮಾರ್ ಅಭಿಮಾನಿ ಬಳಗದಅಧ್ಯಕ್ಷರಾಗಿ ಕೆಲಸ ಮಾಡಿದ್ದರು ಸಿ.ಎಸ್ ಶಿವಳ್ಳಿ.

ಈ ಮೂಲಕ ಜನಪರ ಹೋರಾಟ ಮಾಡುತ್ತಿದ್ದ ಸಿ.ಎಸ್ ಶಿವಳ್ಳಿ‌ 1994ರಲ್ಲಿ ಬಂಗಾರಪ್ಪ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಸೋಲುಂಡರು.1999 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಕಂಡ ಶಿವಳ್ಳಿ, ನಂತರ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರು. 2008 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡ ಶಿವಳ್ಳಿ, 2013 ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು‌ ಕಂಡರು. ನೆರವು ಕೇಳಿಕೊಂಡು ಬಂದವರಿಗೆ ವೈಯಕ್ತಿಕ ಸಹಾಯ ಮಾಡ್ತಿದ್ದ ಶಿವಳ್ಳಿ, ಬಡವರಿಗೆ ಸರ್ಕಾರಿ ಯೋಜನೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದರು.

ಮಹದಾಯಿ ನೀರಿಗಾಗಿ ಹೋರಾಟ,‌ ಕಣಕುಂಬಿ & ದೆಹಲಿಯ ಜಂತರ್, ಮಂತರ್‌ಗೆ ಕ್ಷೇತ್ರದ ಜನರನ್ನು ಕರೆದೊಯ್ದು ಹೋರಾಟ ಮಾಡಿದ್ದ ಶಿವಳ್ಳಿ, ಬಡವರ ಬಂಧು ಎಂದೇ ತಾಲೂಕಿನಲ್ಲಿ ಹೆಸರುವಾಸಿ.2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇವಲ 634 ಮತಗಳ ಅಂತರದಿಂದ ಗೆಲುವು ಕಾಣುವ ಮೂಲಕ ಪ್ರಯಾಸದ ಗೆಲುವು ದಾಖಲಿಸಿದ ಶಿವಳ್ಳಿ, ಸದ್ಯ ಪೌರಾಢಳಿತ ಸಚಿವರಾಗಿ, ಹುಬ್ಬಳ್ಳಿ-ಧಾರವಾಡ ಉಸ್ತುವಾರಿ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

Leave a Reply