ಬಳ್ಳಾರಿ ಗುಡಿಗೆ ಉಗ್ರಪ್ಪನೇ ಪೂಜಾರಿ, ಮತದಾರರೇ ದೇವರು ಎಂದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

‘ಬಳ್ಳಾರಿ ಎಂಬ ಗುಡಿಗೆ ಉಗ್ರಪ್ಪನೇ ಪೂಜಾರಿ. ದೆಹಲಿಯಲ್ಲಿ ಬಳ್ಳಾರಿ ಜನರ ಧ್ವನಿಯಾಗಲು ಅವರೇ ಸೂಕ್ತ. ಕಳೆದ ಉಪ ಚುನಾವಣೆಯಲ್ಲಿ ನೀವು ಕೊಟ್ಟ ಜಯವೇ ನಮಗೆ ಕಂಠಿಹಾರ.

ಮತದಾನ ನಿಮ್ಮ ಅಸ್ತ್ರ. ಅದನ್ನು ಸರಿಯಾಗಿ ಬಳಸಿಕೊಳ್ಳಿ’ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಮೈತ್ರಿ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರನ್ನು ಮತ್ತೇ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಳ್ಳಾರಿಯ ಸಂಡೂರು ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಶ್ರೀರಾಮುಲು ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಮೈತ್ರಿ ಸರ್ಕಾರದಲ್ಲಿ ಬಳ್ಳಾರಿಗೆ ನೀಡಿರುವ ಕೊಡುಗೆಯನ್ನು ಪ್ರಸ್ತಾಪಿಸಿದರು. ಸಮಾವೇಶದಲ್ಲಿ ಸಚಿವರು ಮಾಡಿದ ಭಾಷಣದ ಸಾರಾಂಶ ಹೀಗಿದೆ….

‘ನನಗೆ ಬಳ್ಳಾರಿ ಮತದಾರರು ಮುಖ್ಯ. ಕಳೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಜನತೆ ಉಗ್ರಪ್ಪ ಅವರಿಗೆ ಕೊಟ್ಟ ತಿರ್ಪು ಇತಿಹಾಸ ಪುಟ ಸೇರಿದೆ. ಅದಕ್ಕೆ ನಾನು ಮತದಾರರಿಗೆ ಸಾಷ್ಟಾಂಗ ನಮಸ್ಕಾರ ಮಾಡುವೆ.

ಕೃಷ್ಣದೇವರಾಯ  ಕಾಲದಲ್ಲಿ ಸಾಮಂತ ರಾಜ ಇಲ್ಲಿ ಕುಸ್ತಿ ಆಡಿ ಗೆಲ್ತಾರೆ. ಆವಾಗ ಕೃಷ್ಣದೇವರಾಯ ಗೆದ್ದ ಸಾಮಂತರಿಗೆ ಎರಡು ಕಂಠಿ ಹಾರ ಕೊಟ್ಟು ಕಳಿಸುತ್ತಾರೆ. ಅದೇ ರೀತಿ ಉಗ್ರಪ್ಪ ಅವರನ್ನು ಗೆಲ್ಲಿಸಲು ನಾನು ಇಲ್ಲಿ ಬಂದಿದ್ದೇ. ನಾನು ಬಳ್ಳಾರಿ ಬಂದ ಕೂಡಲೇ ಕನಕ ದುರ್ಗಮ್ಮ ದೇವಾಲಯಕ್ಕೆ ಹೋಗದೇ, ಕೋಟೆ ಮಲ್ಲೇಶ್ವರನ ದೇವಾಲಯಕ್ಕೆ ಹೋದೆ. ನಾನು ಯುದ್ಧಕ್ಕೆ ಬಂದಿದ್ದೇನೆ, ಯುದ್ದದಲ್ಲಿ ಸಾವು ನೋವು ಆಗಬಾರದು ಅಂತ ಬೇಡಿದೆ. ಅದರಂತೆ ಬಳ್ಳಾರಿ ಜನರು ಉಗ್ರಪ್ಪ ಅವರನ್ನು ಗೆಲ್ಲಿಸಿ ನನಗೆ ಕಂಠಿಹಾರವನ್ನೇ ಕೊಟ್ಟರು.

ನಮ್ಮ ಶ್ರೀ ರಾಮುಲು ಅಣ್ಣನವರು ಈ ಕನಕಪುರದ ಗೌಡರು ಇಲ್ಲಿಗ್ಯಾಕೆ ಬಂದಾರೆ ಅಂತ ನನಗೆ ಕೇಳಿದ್ದರು. ಬರಗಾಲ ಇದೆ ಹಂಪಿ ಉತ್ಸವ ಬ್ಯಾಡ ಅಂದ್ರು. ಆದರೆ ಉತ್ಸವ ಮಾಡಲೇಬೇಕು ಅಂತಾ ಉಗ್ರಪ್ಪ ಬೆನ್ನತ್ತಿದ್ದರು. ಎರಡು ದಿನ ಹಂಪಿ ಉತ್ಸವ ಮಾಡಿದ್ವಿ.

ಚುನಾವಣೆ ನಂತರ ಕೊಟ್ಟ ಮಾತಿನಂತೆ ಬಳ್ಳಾರಿ ಜನರಿಗೆ ಕೊಡುಗೆ ನೀಡಿದ್ದೇವೆ. 280 ಎಕರೆ ಪ್ರದೇಶದಲ್ಲಿ 8 ಸಾವಿರ ಮನೆಯ ಟೆಂಡರ್ ಕರೆಸಿ, ಎಲ್ಲಾ ಶಾಸಕರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ಎಲ್ಲಾ ಕ್ಷೇತ್ರದಲ್ಲಿ ಒಂದೊಂದು ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಬಳ್ಳಾರಿಗೆ ಇಬ್ಬರು ಸಚಿವರನ್ನು ಕೊಟ್ಟಿದ್ದೇವೆ. ನಾಗೇಂದ್ರಗೂ ಬೋರ್ಡ್ ಛೇರ್ ಮೇನ್ ಅನೌಸ್ ಮೆಂಟ್ ಇತ್ತು ಆದರೆ ತಡೆಹಿಡಿಯಲಾಯಿತು. ಭೀಮಾನಾಯ್ಕ್ ಗೆ ಕ್ಯಾಬಿನೆಟ್ ದರ್ಜೆಯ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೊಟ್ಟಿದ್ದೇವೆ. ಈ ಕೆಲಸದ ಬಗ್ಗೆ ನನಗೆ ಸಮಾಧಾನ ಇದೆ.

ನಾಗೇಂದ್ರ ನಮ್ಮ ಹುಡುಗ. ಬರ್ಬೇಕಿತ್ತು ಆದರೆ ಬಂದಿಲ್ಲ. ನಾನೇ ಹೋಗಿ ಭೇಟಿ ಮಾಡುವೆ. ನಮ್ಮ ಹುಡುಗರು ತಪ್ಪು ಮಾಡ್ತಾರೆ ನಿಜ, ಹಾಗಂತ ನಾವು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಳೆದ ಚುನಾವಣೆ ವೇಳೆ ಶ್ರೀರಾಮುಲು ಅಣ್ಣ 6ನೇ ತಾರಿಖು ನಂತರ ಶಾಂತ ಡೆಲ್ಲಿಗೆ, ಡಿಕೆಶಿ ಜೈಲಿಗೆ ಅಂದಿದ್ರು. ಅಕ್ಕ ದೆಹಲಿಗೋಗಲಿಲ್ಲ, ಉಗ್ರಪ್ಪ ಹೋದ್ರು. ನಾನು ಜೈಲಿಗೆ ಹೋಗಲಿಲ್ಲ, ಇಲ್ಲೇ ಇದ್ದೇನೆ. ಶ್ರೀರಾಮುಲು ಅಣ್ಣಾ ನಿಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ.

ನನ್ನನ್ನು ದೊಡ್ಡವನು ಅಂತೀರಾ. ನಾನು ದೊಡ್ಡವನಾಗಬೇಕಾದರೇ, ನಮ್ಮ ಕಾರ್ಯಕರ್ತರು ಮುಖ್ಯ. ಈ ಎಲೆಕ್ಷನ್ ಕ್ಯಾಂಡಿಡೇಟ್ ಉಗ್ರಪ್ಪ ಅಲ್ಲ, ನಮ್ಮ ಕಾರ್ಯಕರ್ತರು. ಕಾಂಗ್ರೆಸ್ ನಲ್ಲಿ ಹೆಣ ಹೋರೋನು ನಾನೇ, ಪಲ್ಲಕ್ಕಿ ಹೋರೋನೂ ನಾನೇ. ಸರ್ವವೂ ಕಾಂಗ್ರೆಸ್ ಪಕ್ಷದಲ್ಲಿ ಸಿಗುತ್ತೆ.

ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಇರ್ಲಿಲ್ಲ. ಹೀಗಾಗಿ ಆ ನಾಯಕರು ಕಾಂಗ್ರೆಸ್ ಕಾರ್ಯಕರ್ತ ದೇವೆಂದ್ರಪ್ಪ ಅವರನ್ನು ಕರ್ಕೊಂಡು ಹೋಗಿದ್ದಾರೆ.

ದೇವೆಂದ್ರಪ್ಪ ದೇವರಿದ್ದಂತೆ. ನನ್ನ ಬಳಿಯೂ ಟಿಕೇಟ್ ಕೇಳೋಕೆ ಬಂದಿದ್ರು ಆಗೋಲ್ಲ ಅಂದೆ. ಶ್ರೀರಾಮುಲು ಅವರ ಬಳಿ ಹೋಗಿದ್ದಾರೆ. ಬಾರ್ ಓನರ್ ಗಳು ವಸೂಲಿ ಮಾಡಿ ಕೊಡಿ ಅಂತ‌ ಹೇಳಿದ್ದಾರಂತೆ. ಆದರೆ ವಸೂಲಿಗೆ ಅವಕಾಶ ಇಲ್ಲ. ನಾವು ಬದಲಾವಣೆಗಾಗಿಯೇ ಇಲ್ಲಿಗೆ ಬಂದಿದ್ದೇವೆ. ದೇವೆಂದ್ರಪ್ಪ ಅವರಿಗೆ ಟಿಕೇಟ್ ಕೊಟ್ಟಿದ್ದಿರಿ. ಪಾರ್ಲಿಮೆಂಟ್ ಲಿ ದೇವೆಂದ್ರಪ್ಪಗೆ ಮಾತಾಡೋ ಶಕ್ತಿ ಇದೆ ಏನ್ರಿ?

ಬಳ್ಳಾರಿ ಪುಣ್ಯ ಕ್ಷೇತ್ರ. ಈ ಗುಡಿಗೆ ಉಗ್ರಪ್ಪ ಪೂಜಾರಿ. ಬಳ್ಳಾರಿ ಜನರ ಅರ್ಚಕ ಉಗ್ರಪ್ಪ. ಇದು ಸಾಮಾನ್ಯ ಕ್ಷೇತ್ರ ಆಗಿದ್ರೆ ನಾನೇ ಇಲ್ಲಿ ಸ್ಪರ್ಧೆ ಮಾಡ್ತಿದ್ದೆ. ಮುಂದೆ ಮೀಸಲಾತಿ ಬದಲಾದರೇ, ನನಗೆ ಒಂದು ಅವಕಾಶ ಕೊಡಿ. ಕೊನೆ ದಿನಗಳು ನಾನು ಇಲ್ಲೆ ಕಳೆಯುವ ಅವಕಾಶ ಮಾಡಿಕೊಡಿ.

ಕಳೆದ‌ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನಮಗೆ ಸಹಾಯ ಮಾಡಿದ್ದಾರೆ. ಅವರನ್ನು ಈ ಬಾರಿಯೂ ಸಂಪರ್ಕ ಮಾಡುತ್ತೇನೆ. ನಮ್ಮದು ಅಭಿವೃದ್ಧಿ, ಶಾಂತಿಯ ವಾತಾವರಣ. 2ನೇ ತಾರಿಖು ಮಂಗಳವಾರ ನಾಮಪತ್ರ ಸಲ್ಲಿಸಲು ಮುಂದಾಗುತ್ತೇವೆ. ನೀವೇಲ್ಲರೂ ಬರಬೇಕಿದೆ. ಮತವೇ ನಿಮ್ಮ ಅಸ್ತ್ರ ಅದನ್ನು ಸರಿಯಾಗಿ ಬಳಸಿ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಬೇಕಿದೆ. ನಾಮಪತ್ರ ಸಲ್ಲಿಸಿದ ನಂತರ ನಾನು ಇಲ್ಲೇ ಇದ್ದು ಚುನಾವಣೆ ಮಾಡುವೆ.

ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧೆ?

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಮೋದಿ ಬಂದರೆ ಡಿಕೆಶಿ ಸ್ಪರ್ಧೆ ಮಾಡುತ್ತಾರೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ‘ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಏನೂ ಹೇಳೋತ್ತೋ ಅದನ್ನು ಮಾಡುವೆ. ನಾನು ಯಾವತ್ತೂ ಅರ್ಜಿ ಹಾಕ್ಕೊಂಡು ಹೋಗೋಲ್ಲ. ನನ್ನ ತಮ್ಮನೂ ಅರ್ಜಿ ಹಾಕಿಲ್ಲ. ಪಕ್ಷ ಏನು ತಿರ್ಮಾನ ಮಾಡೋತ್ತೋ ಅದಕ್ಕೆ ನಾನು ರೆಡಿ. ಪಕ್ಷ ಮನೆಯಲ್ಲಿ ಇರು ಅಂದಾಗ ಇದ್ದಿನಿ. ಅಧಿಕಾರ ಮಾಡು ಅಂದಾಗಲೂ ಮಾಡಿದ್ದೇನೆ’ ಎಂದರು.

Leave a Reply