ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೈಕಮಾಂಡ್ ಗೆ ಗಡುವು ಕೊಟ್ಟ ಮುದ್ದಹನುಮೆಗೌಡ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಿ ಭರ್ಜರಿ ಜಯ ಸಾಧಿಸಬೇಕು ಎಂಬ ಉದ್ದೇಶದಿಂದ ಮಾಡಿಕೊಳ್ಳಲಾದ ಮೈತ್ರಿ ಈಗ ಬಂಡಾಯದ ಬೇಗೆಯಲ್ಲಿ ಬೇಯುತ್ತಿದೆ. ಅದರಲ್ಲೂ ತುಮಕೂರು ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಮುದ್ದಹನುಮೆಗೌಡ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ದೊಡ್ಡ ಸವಾಲಾಗಿದೆ.

ಅತ್ತ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾವಾರು ಕಾಂಗ್ರೆಸ್ ಮುಖಂಡರು ಅಪಸ್ವರ ಎತ್ತಿದ್ದ ಪರಿಣಾಮ ಗೌಡರ ಮೊಮ್ಮಕ್ಕಳ ರಾಜಕೀಯ ಪ್ರವೇಶಕ್ಕೆ ಸತ್ವ ಪರೀಕ್ಷೆ ಎದುರಾಗಿತ್ತು. ತುಮಕೂರಿನಲ್ಲಿ ತಣ್ಣಗಿದ್ದ ಮುದ್ದಹನುಮೆಗೌಡ ಇದ್ದಕ್ಕಿದ್ದಂತೆ ಬಂಡಾಯದ ಬಾವುಟ ಹಾರಿಸಿದ್ದಾರೆ. ದೇವೇಗೌಡರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದೆ ಅದರೊಂದಿಗೆ ಗೌಡರ ಗೆಲುವಿಗೂ ದೊಡ್ಡ ವಿಘ್ನ ಎದುರಾಗಿದೆ.

ಮುದ್ದಹನುಮೆಗೌಡರ ಈ ನಡೆ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸೋಮವಾರ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ರೋಡ್ ಶೋನಲ್ಲಿ ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ ಅವರು ಹೇಳಿದ್ದಿಷ್ಟು…

‘ಮುಂದಿನ 24 ತಾಸುಗಳ ತಮ್ಮನ್ನೇ ಮೈತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು. ನಾವು ತ್ಯಾಗ ಮಾಡಿದರೆ ಅದರಿಂದ ಇನ್ನೊಬ್ಬರಿಗೆ ಉಪಯೋಗ ಆಗಬೇಕು. ನಮ್ಮನ್ನು ಬಲಿಪಶು ಮಾಡಿದರೆ ಅದರಿಂದ ದೇಶಕ್ಕೆ ಏನಾದರೂ ದೊಡ್ಡ ಮಟ್ಟದ ಪ್ರಯೋಜನ ಆಗಬೇಕು. ಆದರೆ ಯಾವುದೇ ಕಾರಣವಿಲ್ಲದೇ ಓರ್ವ ಕ್ರಿಯಾಶೀಲ ಸಂಸದನಾದ ನನ್ನನ್ನು ಬಲಿಪಶು ಮಾಡಿದ್ದು ಯಾವ ನ್ಯಾಯ? ನನ್ನನ್ನು ಮೈತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ನಿಜವಾದ ಮೈತ್ರಿ ಧರ್ಮ ಪಾಲಿಸಬೇಕು. ಮಂಗಳವಾರ 3 ಗಂಟೆ ಒಳಗಾಗಿ ನನ್ನ ಹೆಸರನ್ನು ಅಂತಿಮಗೊಳಿಸಬೇಕು.’

Leave a Reply