ಮಂಡ್ಯದಲ್ಲಿ ಮೈತ್ರಿ ಅಬ್ಬರ..! ಕಂಗಾಲಾದ್ರಾ ಸುಮಲತಾ..!?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಅಖಾಡದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಒಂದು ಕಡೆ ಸುಮಲತಾ, ಮತ್ತೊಂದು ಕಡೆ ನಿಖಿಲ್ ಕುಮಾರಸ್ವಾಮಿ ಜನರ ಬಳಿ ಮತಭಿಕ್ಷೆ ಬೇಡುತ್ತಿದ್ದಾರೆ. ಕಳೆದ ವಾರ ನಾಮಪತ್ರ ಸಲ್ಲಿಕೆ ವೇಳೆ ಸುಮಲತಾ ಪರ ನಟ ಯಶ್ ಹಾಗೂ ದರ್ಶನ್ ಭಾಗಿಯಾಗಿ ಸಮಲತಾ ಬೆಂಬಲಿಸುವಂತೆ ಕರೆ ನೀಡಿದ್ರು. ಅಂದಿನ ರ‌್ಯಾಲಿಯಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಸಾವಿರದಷ್ಟು ಅಭಿಮಾನಿಗಳನ್ನು ಸೇರಿಸಿದ್ದರಿಂದ ಮಂಡ್ಯದಲ್ಲಿ ಈ ಬಾರಿ ಜೆಡಿಎಸ್‌ಗೆ ಸೋಲಿನ ರುಚಿ ತೋರಿಸುತ್ತೇವೆ, ಇಷ್ಟೊಂದು ಪ್ರಮಾಣದಲ್ಲಿ ಜನ ಬಂದಿರುವುದೇ ಸಾಕ್ಷಿ ಎಂದು ಎಲ್ಲರು ಮಾತನಾಡಿದ್ರು.

ಆದೇ ಕಾರಣಕ್ಕೆ ಇಂದು ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ, ಎರಡು ಲಕ್ಷಕ್ಕೂ ಮಿಗಿಲಾದ ಕಾರ್ಯಕರ್ತರ ಪಡೆಯನ್ನೇ ಸೇರಿಸಿದ್ರು. ರೈತರ ಪರ ಆಸಕ್ತಿ ಹೊಂದಿರುವ ಸಿಎಂ ಕುಮಾರಸ್ವಾಮಿ, ಮೆರವಣಿಗೆಗೆ ಜೋಡೆತ್ತಿ ಗಾಡಿ ಹೂಡಿಸಿದ್ದು ವಿಶೇಷವಾಗಿತ್ತು.

ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ ಕುಟುಂಬ, ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೀತು. ಬಳಿಕ ನಡೆದಿದ್ದೆಲ್ಲಾ ನಿಖಿಲ್ ಕುಮಾರಸ್ವಾಮಿ ಮೇಲಿನ ಜೆಡಿಎಸ್ ಅಭಿಮಾನಿಗಳ ಜಾತ್ರಾ ಮಹೋತ್ಸವ. ಜಾತ್ರೆಯಲ್ಲಿ ತೇರು ಹೋಗುತ್ತಿದ್ದರೆ ಭಕ್ತರು ಸುತ್ತಮುತ್ತ ಕಾಲ್ನಡಿಗೆಯ ಹೋಗುವ ಹಾಗೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿದ್ರು. ರಥದ ಮುಂಭಾಗದಲ್ಲಿ ಸಾಗುವ ಜಾನಪದ ಕಲಾವಿದರಂತೆ ಜೆಡಿಎಸ್ ರ‌್ಯಾಲಿಯಲ್ಲಿ ಜಾನಪದ ಕಲಾತಂಡಗಳು ಹೆಜ್ಜೆ ಹಾಕಿದ್ದು ಕಾರ್ಯಕರ್ತರ ಸಂಭ್ರಮ ಇಮ್ಮಡಿಯಾಗುವಂತೆ ಮಾಡಿತು.

ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್, ಹೆಚ್.ಡಿ ರೇವಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು ಮತ್ತು ಕಾಂಗ್ರೆಸ್ ನಾಯಕರು (ಚಲುವರಾಯಸ್ವಾಮಿ ಬಣ ಹೊರತುಪಡಿಸಿ) ಹಾಜರಿದ್ದರು. ತೆರೆದ ವಾಹನದಲ್ಲಿ ಸಾಗಿದ ಬೃಹತ್ ರ‌್ಯಾಲಿ ವಿರೋಧಿ ಬಣದ ನಾಯಕರ ಎದೆ ಝಲ್ ಎನ್ನುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ನಾಮಪತ್ರ ಸಲ್ಲಿಕೆ ವೇಳೆ ಡಿಕೆಶಿ, ಅನಿತಾಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಸಿ.ಎಸ್ ಪುಟ್ಟರಾಜು ಮಾತ್ರ ಭಾಗಿಯಾಗಿದ್ರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಸುಮಲತಾ ಅವರನ್ನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೆವು. ಆದ್ರೆ ಸಹೋದರಿ ಸುಮಲತಾ ಅವರು ಮೈಸೂರು ಅಥವಾ ಬೆಂಗಳೂರಿಂದ ಸ್ಪರ್ಧೆ ಮಾಡಲು ನಿರಾಕರಿಸಿದ್ರು. ಸಿಎಂ ಕುಮಾರಸ್ವಾಮಿ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ಕೊಡ್ತೀನಿ ಅಂತಾ ಹೇಳಿದ್ರು ಅದಕ್ಕೂ ಒಪ್ಪಲಿಲ್ಲ. ಸುಮಲತಾ ಹಿಂದೆ ಯಾರೋ ಕೀ ಕೊಟ್ಟು ಎಲೆಕ್ಷನ್‌ಗೆ ನಿಲ್ಲಿಸಿದ್ದಾರೆ. ಅವರು ಯಾರೂ ಅಂತಾನೂ ಗೊತ್ತು. ನೀವು ಕೀ ಕೊಡೊ ಮೂಲಕ ನಿಖಿಲ್ ಗೆಲ್ಲಿಸಬೇಕು ಅಂದ್ರು.

ಕಾಂಗ್ರೆಸ್ ಶಾಸಕ ಮುನಿರತ್ನ ಮಾತನಾಡಿ ಅಂಬರೀಶ್ ನಿಧನರಾದಾಗ ಸಮಾಧಿಗೆ ಸೂಕ್ತ ಸ್ಥಳ ಗುರುತಿಸಿದ್ದೇ ನಿಖಿಲ್ ಕುಮಾರಸ್ವಾಮಿ. ಮಧ್ಯರಾತ್ರಿ ಎರಡು ಗಂಟೆ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿ ಜಾಗ ಗುರುತಿಸಿದ್ದು ಇದೇ ನಿಖಿಲ್. ಇಂತಹ ಅಭಿಮಾನ ಇಟ್ಟುಕೊಂಡಿರುವ ನಿಖಿಲ್‌ನನ್ನು ನೀವು ಗೆಲ್ಲಿಸಿ ಎಂದು ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ರು.

ಸಿಎಂ ಕುಮಾರಸ್ವಾಮಿ ಮಾತನಾಡಿ, ‘ಇದುವರೆಗೂ ನಾನು ನಮ್ಮ ಅಭ್ಯರ್ಥಿಗಳ ಪರವಾಗಿ ಮತ ಕೇಳಲು‌ ಮಂಡ್ಯ ಜಿಲ್ಲೆಗೆ ಬರ್ತಿದ್ದೆ. ಆದ್ರೆ ಈ ಬಾರಿ‌ ನನ್ನ ಮಗನ ಪರವಾಗಿ ಮತ ಕೇಳಲು ಬರ್ತಿದ್ದೇನೆ‌‌. ನನ್ನ ಜೊತೆಯಲ್ಲಿ ಸುಧೀರ್ಘ ಹೋರಾಟ ಮಾಡಿರೋ ಡಿಕೆಶಿ ಜೊತೆ ಸೇರಿ ಹೊಸ ರಾಜಕೀಯ ಮಾಡ್ತಿದ್ದೇವೆ. ಅವ್ರು ನನ್ನ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡ್ತಿದ್ದಾರೆ. ಕೆಲವರು ರಾಜಕೀಯ ಅಸ್ಥಿರತೆ ತರಲು ಪ್ರಯತ್ನಿಸಿದ್ರು. ಆಗಲೂ ಡಿಕೆಶಿ ನನ್ನ ಬೆನ್ನಿಗಿದ್ದು ರಕ್ಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಜನರು ಇಷ್ಟೊಂದು ಪ್ರಮಾಣದಲ್ಲಿ ಸೇರುವ ಮೂಲಕ ಇತಿಹಾಸ ಸೃಷ್ಠಿ ಮಾಡಿದ್ದೀರಿ. ಇನ್ನೂ ಬಿಜೆಪಿಯವ್ರು ಅಭ್ಯರ್ಥಿ ಹಾಕದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದಾರೆ. ನಾನು ಬಜೆಟ್ ಮಂಡಿಸಿ ಮಂಡ್ಯಕ್ಕೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಅನುದಾನ ಕೊಟ್ಟಾಗ ಇದು ಮಂಡ್ಯ ಬಜೆಟ್ ಎಂದು ಮೇಜು‌ ಕುಟ್ಟಿ ವ್ಯಂಗ್ಯವಾಡಿದ್ರು. ಇದೀಗ ಯಾವ ಮುಖ ಹೊತ್ತುಕೊಂಡು ಪಕ್ಷೇತರ ಅಭ್ಯರ್ಥಿ ಜೊತೆ ಬಂದು‌ ಮತ ಕೇಳ್ತಾರೆ?’ ಎಂದು ಪ್ರಶ್ನಿಸಿದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೂಡ ನಾನು ರಾಜಕಾರಣಕ್ಕೆ ಮೋಜು ಮಾಡಲು ಬಂದಿಲ್ಲ. ಮಂಡ್ಯ ಜನರ ಸೇವೆ ಮಾಡಲು ಬಂದಿದ್ದೇನೆ ದಯಮಾಡಿ ಮತಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದ್ರು. ಒಟ್ಟಾರೆ ಜೆಡಿಎಸ್ ಇಡೀ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸುವ ಮೂಲಕ ವಿರೋಧಿ ಪಾಳಯದಲ್ಲಿ ಭಯ ಹುಟ್ಟುವಂತೆ ಮಾಡಿದ್ದಾರೆ. ಇಲ್ಲಿ ಬಂದಿದ್ದ ಜನರೆಲ್ಲಾ ಜೆಡಿಎಸ್‌ಗೆ ಮತ ಹಾಕಿದ್ರೆ ನಿಖಿಲ್ ಗೆಲುವು ಕಷ್ಟವಾಗೋದಿಲ್ಲ.‌ ಆದ್ರೆ ಮತಗಳಾಗಿ ಬದಲಾಗುತ್ತಾ ಅನ್ನೋದಷ್ಟೇ ಕುತೂಹಲ.

Leave a Reply