ಬೆಂಗಳೂರು ಉತ್ತರದಲ್ಲಿ ಗೌಡರ ಜಂಗಿಕುಸ್ತಿ!

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ಉತ್ತರ ಕ್ಷೇತ್ರದಿಂದ ಕಳೆದ ಬಾರಿ ಆಯ್ಕೆಯಾಗಿದ್ದ ಡಿ.ವಿ ಸದಾನಂದಗೌಡ ಅವರು ಕೇಂದ್ರದಲ್ಲಿ‌ ಸಚಿವರಾಗಿ ಕೆಲಸ ನಿರ್ವಹಣೆ ಮಾಡಿದ್ದು, ಈ ಬಾರಿ ಕೂಡ ಬೆಂಗಳೂರು ಉತ್ತರದಿಂದ ಸದಾನಂದ ಗೌಡರು ಸ್ಪರ್ಧಿಸುತ್ತಿದ್ದಾರೆ. ಸೋಮವಾರ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಸದಾನಂದ ಗೌಡರಿಗೆ ಪ್ರತಿಸ್ಪರ್ಧಿಯಾಗಿ ಮೈತ್ರಿ ಅಭ್ಯರ್ಥಿಯಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೆ ಗೌಡ ಅವರನ್ನು ಕಣಕ್ಕಿಳಿಸಲಾಗಿದ್ದು, ಬೆಂಗಳೂರು ಉತ್ತರ ಕ್ತ್ರ ಇಬ್ಬರು ಪ್ರಬಲ ಒಕ್ಕಲಿಗ ಸಮುದಾಯದ ನಾಯಕರ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿದೆ.

ಆರಂಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ ಪಾಲಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರ ಭಾನುವಾರ ರಾತ್ರಿ ಕಾಂಗ್ರೆಸ್ ಬುಟ್ಟಿಗೆ ಸೇರಿತ್ತು. ದೇವೇಗೌಡರ ಸೂಚನೆಯಂತೆ ಎಲ್ಲಾ ಲೆಕ್ಕಾಚಾರ ಮಾಡಿ ಕೃಷ್ಣಭೈರೆ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದ್ದು, ಡಿಸಿಎಂ ಪರಮೇಶ್ವರ್, ಶಾಸಕರಾದ ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್ ಸೇರಿದಂತೆ ಕ್ಷೇತ್ರದ ಎಲ್ಲಾ ಮೈತ್ರಿ ಪಕ್ಷದ ಶಾಸಕರು ಹಾಜರಿದ್ದರು.

ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ‘ನಮ್ಮ ಎಲ್ಲಾ ಬೆಂಗಳೂರು ಶಾಸಕರ ಒಮ್ಮತದ ಅಭಿಪ್ರಾಯದ ಮೇರೆಗೆ ಕೃಷ್ಣಭೈರೇಗೌಡರನ್ನು ಆಯ್ಕೆ ಮಾಡಲಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರೇ ಕೃಷ್ಣಭೈರೇಗೌಡರ ಹೆಸರನ್ನು ಸೂಚಿಸಿದ್ರು. ಈಗಾಗಲೇ ಜೆಡಿಎಸ್ ಕ್ಷೇತ್ರ ಬಿಟ್ಟು ಕೊಟ್ಟಿದ್ದು, ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಬೆಂಗಳೂರು ಉತ್ತರ , ದಕ್ಷಿಣ, ಕೇಂದ್ರ ಈ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ. ಮೂರು ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ಬಿಜೆಪಿಯನ್ನು ವೈಟ್ ವಾಶ್ ಮಾಡುತ್ತೇವೆ ಎಂದಿದ್ದಾರೆ.

ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ, ‘ಸಿದ್ದರಾಮಯ್ಯ ನಿವಾಸದಲ್ಲಿ ಎಲ್ಲಾ ಶಾಸಕರ ಜೊತೆ ಸಭೆ ನಡೆಸಿದ್ದೇವೆ. ಎಲ್ಲಾ ಶಾಸಕರು ಕೃಷ್ಣಭೈರೇಗೌಡರ ಹೆಸರನ್ನೇ ಸೂಚಿಸಿದ್ರು. ಹೀಗಾಗಿ ಎಲ್ಲರ ಒಮ್ಮತದಿಂದ ಕೃಷ್ಣಭೈರೇಗೌಡರನ್ನು ಆಯ್ಕೆ ಮಾಡಿದ್ದೇವೆ. ಸದಾನಂದಗೌಡರಿಗೆ ಬೆಂಗಳೂರು ಉತ್ತರದಲ್ಲಿ ಕೃಷ್ಣಭೈರೇಗೌಡ ಪ್ರಬಲ ಪ್ರತಿಸ್ಪರ್ಧಿ. ಕೃಷ್ಣಭೈರೇಗೌಡ ಒಳ್ಳೆಯ ವಾಗ್ಮಿ ಕೂಡ. ಜೊತೆಗೆ ಕೃಷ್ಣಭೈರೇಗೌಡ ವಿಧಾನಸಭಾ ಕ್ಷೇತ್ರ ಬ್ಯಾಟರಾಯನಪುರ ಕೂಡ ಇದೇ ಭಾಗದಲ್ಲಿ ಬರುತ್ತೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವರನ್ನೇ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ’ ಎಂದಿದ್ದಾರೆ.

ಒಟ್ಟಾರೆ ಸಿದ್ದರಾಮಯ್ಯ ಬೆಂಗಳೂರು ಉತ್ತರವನ್ನು ತುಂಬಾ ಲೆಕ್ಕಾಚಾರ ಹಾಕಿ ಬಿಟ್ಟುಕೊಟ್ಟಿದ್ದಾರೆ ಅನ್ನೋದು ದೇವೇಗೌಡರಿಗೆ ಸ್ವಲ್ಪ ತಡವಾಗಿ ಗೊತ್ತಾಗಿದ್ದು, ನೇರವಾಗಿ ತುಮಕೂರಿನಿಂದ ಸ್ಪರ್ಧೆ ಮಾಡ್ತೇನೆ ಎಂದು ಬಿಟ್ರು. ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನ ಐವರು ಶಾಸಕರಿದ್ದು, ಆ ಐವರು ಶಾಸಕರು ಸಿದ್ದರಾಮಯ್ಯ ಅವರ ಹಿಂದೆ ಮುಂದೆಯೇ ಓಡಾಡುವ ಆಪ್ತ ಶಿಷ್ಯರಾಗಿದ್ದಾರೆ. ಕಳೆದ ಬಾರಿ ಚಾಮುಂಡೇಶ್ವರಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಕಾಯುತ್ತಿದ್ದು, ದೇವೇಗೌಡರು ಬೆಂಗಳೂರು ಉತ್ತರದಲ್ಲಿ ಸ್ಪರ್ಶಿಸಿದ್ರೆ ಸೋಲು ಖಚಿತ ಎಂಬ ವಿಶ್ಲೇಷಣೆಗಳನ್ನು ಮಾಡಲಾಗಿತ್ತು. ಆದ್ರೆ ದೊಡ್ಡಗೌಡರು ಲೆಕ್ಕಾಚಾರ ತುಮಕೂರಿಗೆ ಹೋಗಿದ್ದು, ಉತ್ತರಕ್ಕೆ ಕೃಷ್ಣಭೈರೇಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಗೆಲ್ಲೋದ್ಯಾರು ಅನ್ನೋದೆ ಸದ್ಯ ಇರುವ ಸಸ್ಪೆನ್ಸ್.

Leave a Reply